ಸವಿತಾ ಸಮಾಜದ ಜಾಗೃತಿ ಕಾರ್ಯಕ್ರಮ

ಸವಿತಾ ಸಮಾಜದ ಜಾಗೃತಿ ಕಾರ್ಯಕ್ರಮ
Published on

ಹಾಸನ: ಸವಿತಾ ಸಮಾಜಕ್ಕೆ ಈವರೆಗೂ ಯಾವ ರಾಜಕೀಯ ಪಕ್ಷಗಳಿಂದಲೂ ಅನುಕೂಲವಾಗಿಲ್ಲ ಎಂದು ಕಲಬುರಗಿಯ ಶ್ರೀ ಸವಿತಾ ಪೀಠ ಮಹಾಸಂಸ್ಥಾನ ಮಠದ ಶ್ರೀ ಸವಿತಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.


ಸವಿತಾ ಸಮಾಜದ ಜಾಗೃತಿ, ಗುರುವಂದನೆ, ಪ್ರತಿಭಾ ಪುರಸ್ಕಾರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಂಗವಾಗಿ ನಗರದ ಹಾಸನಾಂಬ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮೀಜಿ ಅವರ ಬೆಳ್ಳಿ ರಥದ ಮೆರವಣಿಗೆ ಸಂದರ್ಭದಲ್ಲಿ ಅವರು ಮಾತನಾಡಿದರು.


ಸವಿತಾ ಸಮಾಜದ ಬಗ್ಗೆ ಸರಕಾರ ಗಮನವಹಿಸುವ ಕೆಲಸ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಈ ಸಮಾಜಕ್ಕೆ ಅನುಕೂಲವಾಗಬೇಕಾದರೆ ಮೀಸಲಾತಿ ಕೊಡಬೇಕು ಎಂದರು.


ಹಾಸನ ಜಿಲ್ಲಾ ಸವಿತಾ ಸಮಾಜ ಇಡೀ ರಾಜ್ಯದಲ್ಲಿ ಒಂದು ಮಾದರಿ ಸಮಾಜವಾಗಿ ಪರಿಚಯವಾಗುತ್ತಿದೆ. ರಾಜ್ಯದಲ್ಲಿಯೇ ಮೊದಲ ಗುರುವಂದನೆ ಕಾರ್ಯಕ್ರಮವನ್ನು ಇಲ್ಲಿ ಮಾಡುತ್ತಿದ್ದು, ಇವರ ಒಗ್ಗಟ್ಟು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಮಾತನಾಡಿ, ಸವಿತಾ ಸಮಾಜದಿಂದ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿಯ ಮಂಗಳವಾದ್ಯ ಕಲಾವಿದರು, ಮಹಿಳಾ ಸಂಘಟನೆಗಳ ಸಹಕಾರದಲ್ಲಿ ಸವಿತಾ ಸಮಾಜದ ಜಾಗೃತಿ ಕಾರ್ಯಕ್ರಮ, ಗುರುವಂದನೆ, ಪ್ರತಿಭಾ ಪುರಸ್ಕಾರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.


ಈ ಸಮಾಜ ರಾಜಕೀಯ, ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ತಮ್ಮ ತಂದೆ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರು ಸವಿತಾ ಸಮಾಜದ ಮೇಲೆ ತಮ್ಮದೇ ಗೌರವ ಇಟ್ಟಿದ್ದರು. ತಾವೂ ಅದನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದರು.


ಮೆರವಣಿಗೆ ನಂತರ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸವಿತಾನಂದನಾಥ ಮಹಾ ಸ್ವಾಮೀಜಿ ಅವರಿಗೆ ಜಿಲ್ಲಾ ಸವಿತಾ ಸಮಾಜ, ಜಿಲ್ಲೆಯ ಎಲ್ಲಾ ಸವಿತಾ ಸಮಾಜ ಸಂಘಟನೆಗಳ ಸಹಯೋಗದಲ್ಲಿ ಗುರುವಂದನೆ ನೆರವೇರಿಸಲಾಯಿತು.


ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್‌ಕುಮಾರ್, ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಎನ್. ಸಂಪತ್ ಕುಮಾರ್, ಜಿಲ್ಲಾಧ್ಯಕ್ಷ ರವಿಕುಮಾರ್, ತಾಲೂಕು ಅಧ್ಯಕ್ಷ ಜಿ. ವೆಂಕಟೇಶ್, ಮಂಗಳವಾದ್ಯ ಕಲಾವಿದರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ಶ್ರೀಕಾಂತ್, ರವಿಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net