

ಹಾಸನ: ಸವಿತಾ ಮಹರ್ಷಿ ಅವರಂತಹ ಮಹಾನ್ ಪುರುಷರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಬೇಕೆಂದು ನೂತನ ಉಪವಿಭಾಗಾಧಿಕಾರಿ ಜೆ.ಕೆ. ಕೃಪಾಲಿನಿ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಗುರುಗಳ ಹಾದಿಯಲ್ಲಿ ಸಾಗಿ ಆಚಾರ-ವಿಚಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಬಹುದು ಎಂದರು.
ಸವಿತಾ ಸಮಾಜ ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಹಾಗಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ ಎಂದರು.
ಹಳೇಬೀಡು ಮುರಾರ್ಜಿ ದೇಸಾಯಿ ಶಾಲೆ ಉಪನ್ಯಾಸಕ ಬಿ.ಎ. ನಟರಾಜು ಮಾತನಾಡಿ, ಸವಿತಾ ಮಹರ್ಷಿ ಕ್ಷೌರಿಕ ಸಮಾಜದ ಮೂಲಪುರುಷರು. ಸವಿತಾ ಮಹರ್ಷಿಗಳು ದೇವಾನುದೇವತೆಗಳಿಗೆ ಕ್ಷೌರ ಮಾಡುತ್ತಿದ್ದರು ಎಂಬ ನಂಬಿಕೆಯಿದೆ. ಹಲವಾರು ವೈಶಿಷ್ಟತೆಯನ್ನು ಹೊಂದಿರುವಂತಹ ಸುಸಂಸ್ಕೃತ ನಾಡು ನಮ್ಮದು. ವಿಶಿಷ್ಟ ಪರಂಪರೆ ಹೊಂದಿರುವ ಸಮಾಜ ಎಂದರೆ ಸವಿತಾ ಸಮಾಜವಾಗಿದೆ ಎಂದು ತಿಳಿಸಿದರು.
ಸವಿತಾ ಸಮಾಜದವರನ್ನು ನಯನ ಜನ ಕ್ಷತ್ರಿಯ ವಂಶದವರು ಎಂದು ಕರೆಯಲಾಗುತ್ತದೆ. ಇವರು ಹಳ್ಳಿಗಳಲ್ಲಿ ನಾಟಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಸವಿತಾ ಸಮಾಜದಲ್ಲಿಯೇ 27 ಉಪಜಾತಿಗಳಿವೆ. ಇದರಲ್ಲಿ ಬರುವ ಹಡಪದ ಸಮಾಜದವರು ಜಗದ್ಗುರು ಬಸವಣ್ಣನ ಕಾಲದಲ್ಲಿ ಲಿಂಗ ಕಟ್ಟಿಸಿಕೊಂಡರು. ಹಡಪದರೂ ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ. ಸವಿತಾ ಸಮಾಜವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಸವಿತಾ ಸಮಾಜ, ಉತ್ತರ ಕರ್ನಾಟಕದಲ್ಲಿ ಹಡಪದ, ದಕ್ಷಿಣ ಕನ್ನಡದಲ್ಲಿ ಭಂಡಾರಿ ಇನ್ನಿತರ ಭಾಗಗಳಲ್ಲಿ ನಾವಿ ಹಾಗೂ ನಯನ ಕ್ಷತ್ರಿಯ ಎಂಬ ಹೆಸರುಗಳಿವೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಮುಖಂಡರಾದ ನಾಗರಾಜು, ಮಹಂತಪ್ಪ ಇತರರು ಇದ್ದರು.