ಸವಿತ ಸಮಾಜದಿಂದ ದಾಸರ ಆರಾಧನಾ ಮಹೋತ್ಸವ

05_Hirisave 1
Published on

ಹಿರೀಸಾವೆ: ಹೋಬಳಿಯ ಸವಿತ ಮಂಗಳವಾದ್ಯ ಕಲಾ ಸಂಘ ಮತ್ತು ನ್ಯೂ ಸವಿತ ಸಮಾಜದ ವತಿಯಿಂದ ತ್ಯಾಗರಾಜರು, ಪುರಂದರದಾಸರು, ಕನಕದಾಸರ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಆರಾಧನಾ ಮಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಕಲಾ ಸಂಘಕ್ಕೆ ನಿವೇಶನ ಸೇರಿ ಮೂಲಸೌಲಭ್ಯಗಳನ್ನು ಒದಗಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಮನುಷ್ಯ ಚೆನ್ನಾಗಿ ಕಾಣಲು ಶೃಂಗಾರ ಮಾಡುವ ಸವಿತಾ ಬಂಧುಗಳನ್ನು ಸಮಾಜವು ಕಡೆಗಣಿಸದೆ, ಗೌರವಯುತವಾಗಿ ಕಾಣುವುದು ಪ್ರತಿಯೊಬ್ಬರ ಕರ್ತವ್ಯ. ಕಲಾವಿದರು ತಮ್ಮ ಮಕ್ಕಳಿಗೆ ಸಂಗೀತ ಕಲೆಯೊಂದಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಒಳ್ಳೆಯ ಪ್ರಜೆಯಾಗಿ ಮಾಡಬೇಕು. 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಸಂಸ್ಥೆಯಿಂದ ಉಚಿತವಾಗಿ ಕೊಡಿಸುತ್ತೇನೆ ಎಂದರು.

ಹಿರಿಯ ಮಂಗಳವಾದ್ಯ ಕಲಾವಿದರನ್ನು ಅತಿಥಿಗಣ್ಯರು ಸನ್ಮಾನಿಸಿದರು. ಕಾರ್ಯಕ್ರಮ ದಲ್ಲಿ ಗ್ರಾ.ಪಂ. ಅಧ್ಯಕ್ಷ ಬೋರಣ್ಣ, ಸದಸ್ಯರಾದ ಮಹೇಶ್, ಪರಮೇಶ್, ಚೇತು, ಕಸಪಾ ಅಧ್ಯಕ್ಷ ಪ್ರಮೋದ್, ಶಿವಶ್ರೀ ಕಲ್ಯಾಣ ಮಂಟಪದ ಮಾಲೀಕ ಕುಮಾರ್, ಜೆಡಿಎಸ್ ಮುಖಂಡರಾದ ರಾಮ ರವಿಕುಮಾರ್, ಮಂಜುನಾಥ್, ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಉದಯಕುಮಾರ್ ಮಹೇಶ್, ವಾಸು, ಶಶಿಕುಮಾರ್, ಚನ್ನರಾಯಪಟ್ಟಣ ತಾಲೂಕಿನ ಸವಿತಾ ಸಮಾಜದ ಮುಖಂಡರಾದ ಟಿ.ವಿ.ದಿನೇಶ್, ಲೋಹಿತ್, ಅನಂದ್ ಸೇರಿ ಹೋಬಳಿಯ ನ್ಯೂ ಸವಿತಾ ಸಮಾಜ ಮತ್ತು ಮಂಗಳವಾದ್ಯ ಕಲಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಕಮಾರಿ ಯೋಗಿತಾ ಭರತನಾಟ್ಯ ಪ್ರದರ್ಶನ ಮಾಡಿದರು. ವೇಣುಗೋಪಾಲ ಹಾಡನ್ನು ಹಾಡಿದರು. ನಂತರ ನಾದಸ್ವರ ಕಛೇರಿ ನಡೆಯಿತು.

ಕಾರ್ಯಕ್ರಮಕ್ಕೂ ಮುನ್ನ ಶನಿದೇವರ ದೇವಸ್ಥಾನದಿಂದ ತ್ಯಾಗರಾಜರು, ಪುರಂದರದಾಸರು, ಕನಕದಾಸರ ಚಿತ್ರದ ಮೆರವಣಿಗೆ ಮಂಗಳವಾದ್ಯ, ವೀರಗಾಸೆ, ಚಿಟ್ಟಿಮೇಳದೊಂದಿಗೆ ಪ್ರಾರಂಭವಾಯಿತು. ಶ್ರೀಕಂಠಯ್ಯ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ, ಉಯ್ಯಲೆ ಕಂಬ ಸೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net