

ಔರಾದ್: ಮಹಿಳೆಯರು ಶೋಷಣೆ, ಅವಮಾನ, ಸವಾಲುಗಳು ದಿಟ್ಟವಾಗಿ ಎದುರಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ಕಲಬುರಗಿ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.
ಪಟ್ಟಣದ ಕಸ್ತೂರಬಾ ಗಾಂಧಿ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ದ್ವೀತಿಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿಯೂ ಮಹಿಳೆಯರನ್ನು ಕಟ್ಟಿಹಾಕುವ ಯೋಚನೆಗಳು ಹೆಚ್ಚಾಗಿವೆ. ಇದನ್ನು ಎದುರಿಸಿ ಜೀವಿಸಬೇಕು ಎಂದರು.
ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯ ಎಂಬುದು ಅರಿತ ಫುಲೆ ದಂಪತಿಗಳು ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣದ ಬೀಜ ಬಿತ್ತಿರುವ ಪರಿಣಾಮ ಪ್ರಸ್ತುತ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯುತ್ತಿವೆ. ಇಂದು ಸಮಾಜದಲ್ಲಿ ಬೇರೂರಿರುವ ಮೌಢ್ಯತೆ, ಅನಿಷ್ಠ ಸಂಪ್ರದಾಯಗಳಿಗೆ ತಿಲಾಂಜಲಿ ಇಡಲು ನಾವು ಮಾನಸಿಕ ಸಿದ್ಧರಾಗುವುದು ಅವಶ್ಯಕ ಎಂದು ಹೇಳಿದರು.
ಶಿಕ್ಷಕಿ ನೀಲಗಂಗಾ ಚಿಟಮೆ ಮಾತನಾಡಿ, ದೇಶದ ಬೆನ್ನೆಲುಬು ರೈತನಾದರೆ ರೈತನ ಬೆನ್ನೆಲುಬು ಮಹಿಳೆ ಎಂಬುದು ಅರಿಯಬೇಕು. ಮಹಿಳೆಯರಿಗೆ ಗೌರವ ನೀಡಬೇಕು ಎಂದರು.
ಈ ವೇಳೆ ಉತ್ತಮ ಸೇವೆಗೈದ 17 ಶಿಕ್ಷಕಿಯರಿಗೆ ಹಾಗೂ ವಿಶೇಷ ಸಾಧಕರಿಗೆ, ಚುನಾಯಿತ ಶಿಕ್ಷಕ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಗಂಗಾ, ತಾಲೂಕಾಧ್ಯಕ್ಷೆ ಮಾರ್ಥಮ್ಮ ಮಾಳಗೆ, ಪ್ರಮುಖರಾದ ಭುವನೇಶ್ವರಿ, ಶಾಂತಮ್ಮ ಸಿಂಗೋಡೆ, ಮೀನಾಕುಮಾರಿ ಬೀದರಕರ್, ಪ್ರಭಾವತಿ ಭಾಲೇಕರ್, ಜ್ಯೋತಿ, ಗೀತಾ ಮೂಲಗೆ, ಪಲ್ಲವಿ ಬಿರಾದಾರ, ಪಂಢರಿ ಆಡೆ, ಶಿವಕುಮಾರ ಘಾಟೆ, ಗಜಾನನ ಮಳ್ಳಾ, ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಬಿ.ಎಂ. ಅಮರವಾಡಿ, ವಿಜಯರೆಡ್ಡಿ ಕೌಳಾಸೆ, ಡಾ. ಶಾಲಿವಾನ ಉದಗೀರೆ, ಶಶಿಕುಮಾರ ಬಿಡವೆ, ಉಮಾಕಾಂತ ಮಹಾಜನ ಇತರರಿದ್ದರು.