

ಹಾಸನ: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಆಹ್ವಾನ ನೀಡಿದ್ದು ಹೌದು ಎಂದು ಶಾಸಕ ಪ್ರೀತಂ ಜೆ.ಗೌಡ ಸ್ಪಷ್ಟಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ಸಾವಿರ ಮತಕ್ಕಿಂತ ಒಂದು ಮತ ಕಡಿಮೆ ಬಂದರೂ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವುದಾಗಿ ಹೇಳಿದ್ದೆ. ನಾನು ಹೇಳಿದ ಸಂದರ್ಭ ಹಾಗೂ ಅದರನ್ನು ಯಾರಾರು ಯಾವ ರೀತಿ ಅರ್ಥೈಸಿಕೊಂಡರೋ ಗೊತ್ತಿಲ್ಲ ಎಂದರು.ನನ್ನ ಕ್ಷೇತ್ರದ ಪ್ರತಿಯೊಂದು ವಿಚಾರಕ್ಕೂ ಹೊಳೆನರಸೀಪುರ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದರು. ಹೇಮಗಂಗೋತ್ರಿ ಟ್ರಕ್ ಟರ್ಮಿನಲ್ ವಿಚಾರದಲ್ಲಿ ಅವರು ಮಾತನಾಡಿದ್ದರು. ಆಗ ನಾನು ನೀವು ಮಾಜಿ ಸಚಿವರು, ಈಗಿನ ಸರ್ಕಾರದ ಭಾಗವಲ್ಲ. ನಿಮಗೆ ಈ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ ಇಲ್ಲಿಂದ ಸ್ಪರ್ಧೆಮಾಡಿ ಎಂದು ಆಹ್ವಾನ ಕೊಟ್ಟಿದ್ದು ನಿಜ. ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.ಹಿಂದೆ ನಾನು ರೇವಣ್ಣ ಅವರು ನಿಂತರೆ ಎಂದು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನನ್ನ ವಿರುದ್ಧ ಅವರು ಸ್ಪರ್ಧೆ ಮಾಡಿದರೆ 50 ಸಾವಿರ ಮತಗಳ ಅಂತದಲ್ಲಿ ಗೆಲ್ಲುವೆ ಎಂದು ಸವಾಲು ಹಾಕಿದರು.
ರೇವಣ್ಣ ಅವರು ಬಂದು ನಿಲ್ಲಲಿ, ಆಮೇಲೆ ನಾನು ಮಾತಾಡುತ್ತೇನೆ.ದಿನಾ ಬೆಳಿಗ್ಗೆ ಎದ್ದು ನನ್ನ ಕ್ಷೇತ್ರದ ಬಗ್ಗೆ ಮಾತಾಡಿದಾಗ ನನಗೂ ಕಿರಿಕಿರಿಯಾಗಿತ್ತು ಎಂದು ಹೇಳಿದರು.ಅವರು ಹೊಳೆನರಸೀಪುರ ಶಾಸಕರಾಗಿ ಹಾಸನದ ರಸ್ತೆ ಒಡೆದರು, ಭೂ ಸ್ವಾಧೀನ ಮಾಡಿ ರೈತರಿಗೆ ತೊಂದರೆ ಕೊಟ್ಟರು. ಅವರಿಂದ ನೋವು ತಿಂದಿರೋ ಸಾಕಷ್ಟು ಜನ ಇಲ್ಲಿದಾರೆ. ಅವರ ರಾಜಕಾರಣದ ಐಡಿಯಾಲಜಿ ಹಾಸನ ಕ್ಷೇತ್ರಕ್ಕೆ ಒಗ್ಗಲ್ಲ. ಹಾಗಾಗಿ ಈ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದೆ. ಆದರೂ ಅವರು ಪದೇ ಪದೆ ನನ್ನ ಕ್ಷೇತ್ರದ ಬಗ್ಗೆ ಮಾತಾಡಿದಾಗ, ನಿಮಗೆ ಆಸಕ್ತಿ ಇದ್ದರೆ ಇಲ್ಲಿಗೆ ಬನ್ನಿ ಎಂದಿದ್ದು ಕರೆದಿದ್ದು ಸತ್ಯ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ನನಗೆ ಏನೂ ಸಂಕೋಚ ಇಲ್ಲ, ರೇವಣ್ಣ ಅವರು ಹಿರಿಯರು ಅವರ ಬಗ್ಗೆ ಗೌರವ ಇದೆ. ಆದರೆ ರಾಜಕಾರಣದಲ್ಲಿ ಅವರು ಜೆಡಿಎಸ್, ನಾನು ಬಿಜೆಪಿ ಅವರು ಮಾಡುವ ರಾಜಕಾರಣವನ್ನು ನಾನೂ ಮಾಡುವೆ ಎಂದು ತಿರುಗೇಟು ನೀಡಿದರು. ಹಾಗಂತ ಅವರಿಗೆ ನಾನು ಪಂಥಾಹ್ವನ ನೀಡಿಲ್ಲ.ನೀವು ಹೊಳೆನರಸೀಪುರ ಶಾಸಕರು, ಅಲ್ಲಿ ಕೆಲಸ ಮಾಡಿ, ನಾನು ಹಾಸನ ಶಾಸಕ ಇಲ್ಲಿ ಕೆಲಸ ಮಾಡ್ತೀನಿ ಎಂದಿದ್ದೇನೆ. ನೀವು ಮಂತ್ರಿಯಾದರೆ ಇಡೀ ಜಿಲ್ಲೆ ಬಗ್ಗೆ ಯೋಚನೆ ಮಾಡಿ, ನಾನು ಮಂತ್ರಿಯಾದರೆ ನಾನು ಅದನ್ನು ಮಾಡುವೆ ಎಂದು ಕುಟುಕಿದರು.
ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ:
ಎಲ್ಲಾ ಪಕ್ಷದ ಮುಖಂಡರೂ ಜನಪ್ರತಿನಿಧಿಯಾಗಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅವರು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವೆ ಮಾಡಲು ಬಂದರೆ ಬೇಡ ಅನ್ನುವ ಶಕ್ತಿ ನನ್ನಲ್ಲಿಲ್ಲ. ಅವರು ಜನರ ಕೆಲಸ ಮಾಡಲಿ, ನಾನೂ ಮಾಡುತ್ತೇನೆ, ಎಲ್ಲರೂ ಜನರಿಗೆ ಒಳಿತಾಗುವ ಕೆಲಸ ಮಾಡೋಣ ಎಂದರು.
ಹಾಸನದಲ್ಲಿ ಭವಾನಿ ರೇವಣ್ಣ ಅವರು ಆಕ್ಟೀವ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕ್ಷೇತ್ರ ಘಟಾನುಘಟಿ ನಾಯಕರನ್ನು ಹೊಂದಿರುವ ಕ್ಷೇತ್ರ. ಜನರ ಆಶೀರ್ವಾದ, ಹಾಸನಾಂಬೆ ಕೃಪೆಯಿಂದ ನಾನು ಶಾಸಕನಾಗಿದ್ದೇನೆ. ಇಲ್ಲಿ ಶಾಸಕರಾಗಲು ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆಯದಾಗಲಿ ಎಂದು ಬಯಸುವೆ ಎಂದರು. ಯಾರೇ ಜನರ ಕೆಲಸ ಮಾಡಿದರೂ, ಅದನ್ನು ಬೇಡ ಎನ್ನಲ್ಲ ಎಂದು ಪ್ರೀತಂಗೌಡ ಹೇಳಿದರು.