ಸವಾಲಾದ ಸೋಂಕಿನ ಮೂಲ

17 GDG 1
Published on

ಗದಗ: ನಗರದಲ್ಲಿ ಎರಡು ಕರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವದರಿಂದ ಸಹಜವಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಗೆ ಕರೊನಾ ಮಾರಿ ಹೇಗೆ ಪ್ರವೇಶ ಪಡೆಯಿತು ಎಂಬುದು ಈವರೆಗೂ ಪತ್ತೆಯಾಗಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ, ಕರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ಅಜ್ಜಿಯಿಂದ (ಪಿ 166) 59 ವರ್ಷದ ಮಹಿಳೆಗೆ (ಪಿ 304) ಕರೊನಾ ವೈರಸ್ ಬಂದಿತಾ ಅಥವಾ 59 ವರ್ಷದ ಮಹಿಳೆಯಿಂದಲೇ ಸಾವನ್ನಪ್ಪಿರುವ ಅಜ್ಜಿಗೆ ಸೋಂಕು ತಗುಲಿತ್ತಾ ಎಂಬ ಪ್ರಶ್ನೆ ಮೂಡಿದೆ. ಇದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಶಾ ಕಾರ್ಯಕರ್ತೆಯರು ಹಾಗೂ ಅರೋಗ್ಯ ಇಲಾಖೆಯಿಂದ ತನಿಖೆ ಮುಂದುವರಿದಿದ್ದು, ಸೋಂಕಿತರು ವಾಸಿಸುವ ರಂಗನವಾಡಿ ಗಲ್ಲಿ ಹಾಗೂ ಎಸ್.ಎಂ. ಕೃಷ್ಣಾ ನಗರದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಂಟೈನ್ಮೆಂಟ್ ಪ್ರದೇಶಗಳಾದ ರಂಗನವಾಡಿ ಗಲ್ಲಿ ಹಾಗೂ ಎಸ್.ಎಂ. ಕೃಷ್ಣ ನಗರಗಳಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಈ ಪ್ರದೇಶದೊಳಗೆ ಹೋಗಲು, ಹೊರಗೆ ಬರಲು ಜನರಿಗೆ ಅವಕಾಶವಿಲ್ಲ.

ನಗರದ ನಿಷೇಧಿತ ಪ್ರದೇಶದಿಂದ ಐದು ಜನರು ಹೊರಗೆ ಬಂದು ನಗರದ ಪಂಚಾಕ್ಷರಿ ನಗರಕ್ಕೆ ತೆರಳಿದ್ದು ಶುಕ್ರವಾರ ಬೆಳಗ್ಗೆ ಕೊಂಚ ಗಲಿಬಿಲಿ ಉಂಟಾಗುವಂತೆ ಮಾಡಿತು. ಅಲ್ಲದೇ, ಕಂಟೈನ್ಮೆಂಟ್ ಪ್ರದೇಶದಿಂದ ಜನರು ಹೊರಗೆ ಬಂದಿರುವ ವಿಷಯ ತಿಳಿದ ಮೇಲೆ ಅವಳಿ ನಗರದ ಜನರು ಅಕ್ಷರಶಃ ಆತಂಕಕ್ಕೆ ಒಳಗಾದರು. ಮಾಹಿತಿ ಲಭ್ಯವಾದ ಕೂಡಲೇ ಆರೋಗ್ಯ ಇಲಾಖೆ ಮತ್ತು ಪೊಲೀಸರು ಕಾರ್ಯಪ್ರವೃತ್ತರಾದರಲ್ಲದೇ ಕಂಟೈನ್ಮೆಂಟ್ ಪ್ರದೇಶದಿಂದ ಹೊರಬಂದಿದ್ದ ಐವರನ್ನು ಮತ್ತೆ ವಾಪಸ್ ಕಳಿಸುವಲ್ಲಿ ಯಶಸ್ವಿಯಾದರು. ಕಂಟೈನ್ಮೆಂಟ್ ಪ್ರದೇಶವಾದ ರಂಗನವಾಡಿ ಗಲ್ಲಿಯಿಂದ ಪಂಚಾಕ್ಷರಿ ನಗರಕ್ಕೆ ಐವರು ಬಂದಿದ್ದರು. ಒಂದೇ ಕುಟುಂಬದ ಐದು ಜನರು ಪೊಲೀಸರ ಕಣ್ಣು ತಪ್ಪಿಸಿ ಪಂಚಾಕ್ಷರಿ ನಗರಕ್ಕೆ ಪ್ರವೇಶ ಮಾಡಿದ್ದರು. ಈ ಕುರಿತು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರಿಂದ ಅಕ್ರಮವಾಗಿ ಬಂದಿದ್ದ ಐದು ಜನರನ್ನು ವಾಪಸ್ ಕಂಟೈನ್ಮೆಂಟ್ ಪ್ರದೇಶಕ್ಕೆ ಕಳಿಸಿದ ಮೇಲೆ ಪ್ರಕರಣ ಸುಖಾಂತ್ಯ ಕಂಡಿತು.

ಮಾಹಿತಿ ಕಲೆ ಹಾಕಲು ಸಿಬ್ಬಂದಿ ಹರಸಾಹಸ: ಪಿ304, 59 ವರ್ಷದ ಮಹಿಳೆಗೆ ಕಿವಿ ಕೇಳುವುದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಗೆ ಮಾಹಿತಿ ಕಲೆ ಹಾಕುವುದು ಕೊಂಚ ತಲೆನೋವಾಗಿದೆ. ಸೋಂಕು ಎಲ್ಲಿಂದ ತಗುಲಿರಬಹುದು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಸಾಹಸ ಪಡುತ್ತಿದ್ದಾರೆ. ಮಹಿಳೆಯ ಮಕ್ಕಳು ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ.

ಮಹಿಳೆಗೆ ನಾಲ್ಕು ಜನ ಮಕ್ಕಳಿದ್ದು, ಮೂವರು ಪುತ್ರರು, ಓರ್ವ ಪುತ್ರಿ, ಅಳಿಯ ಹಾಗೂ ಮೊಮ್ಮಗಳು ಒಂದೇ ಮನೆಯಲ್ಲಿ ವಾಸವಾಗಿದ್ದರು. ಸದ್ಯ ಈ ಆರು ಜನರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಶಿವಮೂಗ್ಗಕ್ಕೆ ಕಳುಹಿಸಲಾಗಿದೆ. ನಿಷೇಧಿತ ರಂಗನವಾಡಿ ಗಲ್ಲಿ ಪ್ರದೇಶದ 416 ಜನರನ್ನು ಜಿಲ್ಲಾಡಳಿತ ಹಂತ ಹಂತವಾಗಿ ತಪಾಸಣೆ ಮಾಡಲು ಮುಂದಾಗಿದೆ. ಮುಖ್ಯವಾಗಿ ಪಿ 304 ಮಹಿಳೆಗೆ ಸಂಬಂಧಿಸಿದಂತೆ 33 ಮನೆಗಳ 150 ಕ್ಕೂ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕರೊನಾ ಸೋಂಕಿನಿಂದ ಸಾವನ್ನಪ್ಪಿದ ಪಿ-166 ವೃದ್ಧೆ ಹಾಗೂ ಪಿ 304 ಮಹಿಳೆ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಇಬ್ಬರಿಗೂ ಉತ್ತಮ ಒಡನಾಟವಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

ಜನರಲ್ಲಿ ಹೆಚ್ಚಿದ ಆತಂಕ: ಗದಗ ನಗರದಲ್ಲಿ ಎರಡು ಕರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದರಿಂದ ಗದಗ-ಬೆಟಗೇರಿ ಅವಳಿನಗರದ ಜನರು ಆತಂಕ ಹೆಚ್ಚಾಗಿದೆ. ತರಕಾರಿ, ದಿನಸಿ ಖರೀದಿಗಾಗಿ ಮುಗಿಬೀಳುತ್ತಿದ್ದ ಜನರು ಶುಕ್ರವಾರ ಬಹುತೇಕ ಜನರು ಮನೆಯಿಂದ ಹೊರಬರಲೇ ಇಲ್ಲ. ಹೀಗಾಗಿ ನಗರದ ಗ್ರೇನ್ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

800 ವಾಹನ ವಶಕ್ಕೆ: ಲಾಕ್ ಡೌನ್ ಘೊಷಣೆ ನಂತರ ಈವರೆಗೂ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಉಲ್ಲಂಘಿಸಿದವರ 800 ವಾಹನಗಳನ್ನು ಸೀಜ್ ಮಾಡಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಅತ್ಯಂತ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಉಳಿದೆಡೆ ಅಗತ್ಯ ಕೆಲಸ ಕಾರ್ಯಗಳಿಗೆ ತೆರಳುವವರನ್ನು ಹೊರತುಪಡಿಸಿ ಕಾರಣವಿಲ್ಲದೆ ಸುತ್ತಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ತಿಳಿಸಿದರು. ಲಾಕ್ ಡೌನ್​ನಲ್ಲಿಯೂ ಬ್ಯಾಂಕ್, ಪಡಿತರ ವಿತರಣೆ, ಕಿರಾಣಿ, ಎಪಿಎಂಸಿ, ತರಕಾರಿ ಸೇರಿ ಅಗತ್ಯ ಸೇವೆಗಳನ್ನು ಆರಂಭಿಸಲಾಗಿದ್ದು, ಜನರು ತಮ್ಮ ಕೆಲಸ ಮುಗಿಸಿಕೊಂಡ ಮೇಲೆ ಮನೆ ಸೇರಬೇಕು. ಅನವಶ್ಯಕ ಸುತ್ತಾಟ ಸರಿಯಲ್ಲ. ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net