

ಚಿತ್ರದುರ್ಗ: ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಜಿಪಂ ಸಿಇಒ ಎಸ್.ಜೆ.ಸೋಮ ಶೇಖರ್ ಹೇಳಿದರು.
ರಾಜ್ಯನಿವೃತ್ತ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗೂ ಹೊಸ ವರ್ಷದ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ,ಜಿಲ್ಲಾಧಿಕಾರಿ ಜತೆ ಚರ್ಚಿಸಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಸರ್ಕಾರಿ ನೌಕರರು ನಿವೃತ್ತಿ ಬಳಿಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ತೊಂದರೆಗಳಿದ್ದರೆ ಯಾವುದೇ ಸಂದರ್ಭದಲ್ಲಾದರೂ ನನ್ನ ಕಚೇರಿಗೆ ಬನ್ನಿ,ಹಿಂಜರಿಕೆ ಬೇಡ. ನಿಮ್ಮೊಂದಿಗೆ ನಾನಿದ್ದೇನೆ. ಮುಪ್ಪಿನ ಕಾಲದಲ್ಲಿ ಜೀವನಕ್ಕೆ ಯಾವುದೇ ತೊಂದರೆ ಆಗ ಬಾರದು. ವಿನಾಕಾರಣ ಅಲೆದಾಡಿಸದೆ ಕೆಲಸ ಮಾಡಿಕೊಟ್ಟಾಗ ಸರ್ಕಾರಿ ನೌಕರರೆಡೆ ಜನರಲ್ಲಿ ಗೌರವ ಭಾವನೆ ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ರಂಗಪ್ಪರೆಡ್ಡಿ ಮಾತನಾಡಿ,ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ಚಂದ್ರಚೂಡ್ ಅವರು,ಸರ್ಕಾರಗಳು, ನಿವೃತ್ತ ನೌಕರರಿಗೆ ಸವಲತ್ತುಗಳನ್ನು ಸರ್ಕಾರಗಳು ಕೊಡಬೇಕು. ಅದು ಅವರ ಹಕ್ಕು,ಭಿ ಕ್ಷೆಯಲ್ಲ ಎಂದು ಹೇಳಿದ್ದಾರೆಂದು ನೆನಪಿಸಿದರು.
ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಜೆ.ವೈಶಾಲಿ,ಸಂಘದ ಜಿಲ್ಲಾ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ,ಸಾಂಸ್ಕೃತಿಕ ಹಾಗೂ ಮನೋರಂಜನಾ ಕೇಂದ್ರದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಎಂ.ಶಿವಾನಂದಪ್ಪ,ಬಿ.ಮಂಜುನಾಥ್, ಬಿ.ಪಿ.ಪ್ರೇಮನಾಥ್, ಎಫ್.ಆರ್.ಹಾಲಗೇರಿ, ಎನ್.ಆರ್.ಬೈಯಣ್ಣ, ನಾಗರಾಜ್ ಮತ್ತಿತರರು ಇದ್ದರು. ತುಮಕೂರು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ವೈ.ರಮಾಕುಮಾರ್,ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮತ್ತಿತರ 25ಕ್ಕೂ ಅಧಿಕ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.