

ಹನೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೊರಕುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್ ತಿಳಿಸಿದರು.
ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಗಳವಾರ ಜನಮಂಗಳ ಕಾರ್ಯಕ್ರಮದಡಿ ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಿ, ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸ್ವ ಸಹಾಯ ಸಂಘಗಳನ್ನು ರಚಿಸುವುದರ ಮೂಲಕ ಮಹಿಳೆಯರಿಗೆ, ರೈತರಿಗೆ ಹಲವು ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಸ್ವಚ್ಛತೆ, ದೇಗುಲಗಳ ಅಭಿವೃದ್ಧಿ, ಮಠ, ಮಂದಿರ, ಸಮುದಾಯ ಭವನ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಅಲ್ಲದೇ ನಿರ್ಗತಿಕರಿಗೆ ಮಾಸಾಶನ, ವಿಕಲಚೇತನರಿಗೆ ಅಗತ್ಯ ಸಲಕರಣೆಗಳು, ಅಶಕ್ತರಿಗೆ ವಾಟರ್‌ಬೆಡ್ ಹಾಗೂ ವಾತ್ಸಲ್ಯ ಮನೆ ಶಿಷ್ಯವೇತನ ಸೇರಿದಂತೆ ಇನ್ನು ಅನೇಕ ಸೌಕರ್ಯಗಳನ್ನು ಒದಗಿಸುತ್ತಿದೆ. ಈ ಮುಲಕ ಉತ್ತಮ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.
ವಿಶ್ವಕರ್ಮ ಸಂಘದ ಅಧ್ಯಕ್ಷ ಶ್ರೀನಿವಾಸ್, ಯೋಜನೆಯ ವಲಯ ಮೇಲ್ವಿಚಾರಕ ಸುರೇಶ್ ಇನ್ನಿತರರು ಇದ್ದರು.