

ಮೈಸೂರು: ಸಂವಿಧಾನ ರಕ್ಷಣೆ ನೀಡುತ್ತದೆ ಎಂದು ಹೇಳುವರು ಸಂವಿಧಾನದಲ್ಲಿ ಏನಿದೆ ಎಂದು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವಿಷಾದಿಸಿದರು.
ಶ್ರಮಣ ಸಂಸ್ಕೃತಿ ಟ್ರಸ್ಟ್, ಬಯಲು ಬಳಗದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 90ರ ನಂತರದ ಕರ್ನಾಟಕ ವಿಷಯ ಕುರಿತ ರಾಜ್ಯ ಮಟ್ಟದ ಕಮ್ಮಟದ ಮೊದಲ ಗೋಷ್ಠಿಯಲ್ಲಿ ಸಂವಿಧಾನದ ಆಶಯಗಳ ಪಲ್ಲಟ ಕುರಿತು ಮಾತನಾಡಿದರು.
ಎಲ್ಲರೂ ಸಂವಿಧಾನ ಕುರಿತು ಮಾತನಾಡುತ್ತಾರೆ. ಅದರೆ ಸಂವಿಧಾನದಲ್ಲಿ ಏನಿದೆ ಎಂಬುದನ್ನು ತಿಳಿಸಿಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಜನರು ಕೂಡ ಸ್ವಯಂಪ್ರೇರಣೆಯಿಂದ ಸಂವಿಧಾನ ತಿಳಿದುಕೊಳ್ಳಲು ಮುಂದಾಗಿಲ್ಲ. ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡರೆ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಹೇಳಿದರು.
ಸಂವಿಧಾನವನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದರಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎನ್ನುವ ಮಾತಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಅದು ಎಲ್ಲರಿಗೂ ರಕ್ಷಣೆ ನೀಡಿದೆ. ಇಂತಹ ಸುರಕ್ಷತೆ ನಮ್ಮ ಸಂವಿಧಾನದಿಂದ ಮಾತ್ರವೇ ಸಾಧ್ಯ. ಹಾಗಾಗಿ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಲ್ಯಾಣ ರಾಜ್ಯದ ಕಲ್ಪನೆಯಿಂದ ಸರ್ಕಾರ ಹಿಂದೆ ಸರಿಯುತ್ತಿದ್ದರೂ ಸುಮ್ಮನಿದ್ದೇವೆ. ಮುಖ್ಯವಾಗಿ ದೇಶದ ಎಲ್ಲ ಕ್ಷೇತ್ರಗಳೂ ಖಾಸಗೀಕರಣ ವ್ಯಾಪಿಸುತ್ತಿದ್ದರೂ ಬಾಯಿ ಮುಚ್ಚಿಕೊಂಡು ಕುಳಿತಿದ್ದೇವೆ. ಯುವ ಜನಾಂಗ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ. ಹಾಗಾಗಿ ಇಂತಹ ಗಂಭೀರ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ ಎಂದು ಹೇಳಿದರು.
ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ಅವರು, ಹಿಂದುಳಿದ ವರ್ಗ, ಮಂಡಲ್ ಆಯೋಗ ಮತ್ತು ಹಾವನೂರು ಆಯೋಗದ ಕುರಿತು ವಿಷಯ ಮಂಡಿಸಿದರು. ಲೇಖಕ ಚಂದ್ರಶೇಖರ್ ಐಜೂರ್ ಇತರರು ಇದ್ದರು.