

ಸವದತ್ತಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ವಾರಾತ್ಯಂದ ಲಾಕ್‌ಡೌನ್‌ಗೆ ಸವದತ್ತಿ ಪಟ್ಟಣದಲ್ಲಿ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಕೆಲ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಪುರಸಭೆ ಸಿಬ್ಬಂದಿ ದಂಡ ವಿಧಿಸಿದರೆ, ಪೊಲೀಸ್ ಕಾವಲು ಪಡೆ ಲಾಠಿ ರುಚಿ ತೋರಿಸಿತು. ಕೆಲ ವಾಹನಗಳನ್ನು ಪೊಲೀಸರು ಸೀಜ್ ಮಾಡಿದರು. ಉಳಿದಂತೆ ಅಗತ್ಯ ವಸ್ತುಗಳ ಸೇವೆಯಲ್ಲಿ ಸಮಸ್ಯೆಯಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಬೆಟಗೇರಿ ವರದಿ: ವಾರಾತ್ಯಂದ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇತರೆ ಅಂಗಡಿಗಳನ್ನು ಶನಿವಾರ ಬಂದ್ ಮಾಡಲಾಗಿತ್ತು. ಗ್ರಾಮದ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಗ್ರಾಪಂ ಹಾಗೂ ಕುಲಗೋಡ ಪೊಲೀಸ್ ಠಾಣೆ ಸಿಬ್ಬಂದಿ ರಸ್ತೆಗಿಳಿದವರಿಗೆ ದಂಡ ವಿಧಿಸಿದರು.
ಕುಡಚಿ ವರದಿ: ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಅನಗತ್ಯವಾಗಿ ಶನಿವಾರ ಮನೆಯಿಂದ ಹೊರಬಂದವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಕುಡಚಿ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ಅವರು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕರೆಯಿಸಿ ಶನಿವಾರ 50ಕ್ಕೂ ಹೆಚ್ಚು ಜನರ ಮೂಗು ಹಾಗೂ ಗಂಟಲು ದ್ರವ ಸಂಗ್ರಹಿಸಿ ತಪಾಸಿಸಲಾಗಿದೆ ಎಂದರು. ಮಾಸ್ಕ್ ಧರಿಸದೆ ದೈಹಿಕ ಅಂತರ ಕಾಪಾಡದೆ ನಿರ್ಲಕ್ಷವಹಿಸಿದ್ದ ಜನರಿಗೆ ಪಿಎಸ್‌ಐ ಶಿವರಾಜ ಧರೆಗೋಣ ಅವರು 100 ರೂ.ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ವೈದ್ಯಾಧಿಕಾರಿ ಡಾ.ಸತೀಶ ಕಲಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿದರು.