ಸ್ವಚ್ಛತೆ ಕಾಪಾಡದಿದ್ರೆ ಕ್ರಿಮಿನಲ್ ಪ್ರಕರಣ

CTD 11 B.S.Pateel
Published on

ಚಿತ್ರದುರ್ಗ:ನಗರದ ಸ್ವಚ್ಛತೆ ಕಾಪಾಡದಿದ್ದರೆ ನಗರಸಭೆ ಸೇರಿ ಮೇಲಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದ್ದು, ಕರ್ತವ್ಯ ಲೋಪ ಕಂಡು ಬಂದರೆ, ಕ್ರಮ ಅನಿವಾರ್ಯ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಟೆನಗರಿಯ ಹಲವೆಡೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದ್ದು, ಐತಿಹಾಸಿಕ ಪರಂಪರೆಯುಳ್ಳ ಸ್ಥಳಕ್ಕೆ ಧಕ್ಕೆಯ ಜತೆಗೆ ಅಭಾಸ ಉಂಟಾಗಿದೆ. ಇದಕ್ಕೆ ನಗರಸಭೆಯ ಅಧಿಕಾರಿಗಳು ಕಾರಣ ಎಂದು ಅಸಮಧಾನ ಹೊರಹಾಕಿದರು.

ಸ್ವಚ್ಛತೆ ಕಾಪಾಡದಿದ್ದರೆ, ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಕವಾಡಿಗರಹಟ್ಟಿಯಲ್ಲಿ ನಡೆದ ಘಟನೆ ಇಡೀ ನಗರಕ್ಕೆ ವ್ಯಾಪಿಸಿದರೆ, ಜನಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಲು ಯಾವ ವೈದ್ಯರಿಂದಲೂ ಸಾಧ್ಯವಿಲ್ಲ. ಕೆಲವೊಂದು ಮುನ್ನೆಚ್ಚರಿಕೆ ನೀಡುತ್ತಿದ್ದು, ಎಚ್ಚರವಹಿಸದಿದ್ದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದರು.

ಕವಾಡಿಗರ ಹಟ್ಟಿಯಲ್ಲಿ ಮೂಲಸೌಕರ್ಯಗಳಿಲ್ಲ. ಪಿಟ್‌ಗಳು, ಚರಂಡಿಗಳು, ನಲ್ಲಿ ನೀರಿನ ಸಂಪರ್ಕ ಪಕ್ಕ-ಪಕ್ಕದಲ್ಲೇ ಇರುವ ಕಾರಣ ಪೈಪ್ ಹೊಡೆದು ನಲ್ಲಿ ನೀರಿನೊಂದಿಗೆ ಬೆರೆತರೆ ಮತ್ತಿನ್ಯಾವ ರೋಗ ಬೇಕಾದರೂ ಹರಡಬಹುದು. ಇದಕ್ಕೆ ಆಸ್ಪದ ಕೊಡಬೇಡಿ. ಘಟನೆ ಸಂಬಂಧ ಜಿಲ್ಲಾಡಳಿತ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ವರದಿ ನಂತರವೇ ನಿಖರ ಕಾರಣ ತಿಳಿಯಲು ಸಾಧ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net