ಸಲಾದಹಳ್ಳಿ ಜೋಡಿ ಕೊಲೆ ಪ್ರಕರಣ, ಆರೋಪಿ ಬಂಧನಕ್ಕೆ ದಲಿತಪರ ಸಂಘಟನೆ ಆಗ್ರಹ, ಶವ ಇರಿಸಿ ಕುಟುಂಬಸ್ಥರ ಪ್ರತಿಭಟನೆ

Screenshot_20210623-113815_WhatsApp
Published on

ವಿಜಯಪುರ: ಸಲಾದಹಳ್ಳಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಯುವಕನ ಶವ ಇಟ್ಟು ಕುಟುಂಬಸ್ಥರು ಹಾಗೂ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಮೃತ ಯುವಕ ಬಸವರಾಜ ಬಡಿಗೇರ ದಲಿತ ಸಮುದಾಯದವನೆಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು.

ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಮಂಗಳವಾರ ನಡೆದ ಜೋಡಿ ಕೊಲೆ ಪ್ರಕರಣ ಇದೀಗ ಕಾವೇರಿದೆ. ಅನ್ಯ ಕೋಮಿನ ಬಾಲಕಿಯನ್ನು ಪ್ರತೀಸಿದನೆಂಬ ಕಾರಣಕ್ಕೆ ದಲಿತ ಯುವಕನನ್ನು ಕೊಲೆ ಮಾಡಲಾಗಿದೆ. ಇದೊಂದು ಅಮಾನವೀಯ ಹಾಗೂ ಅನಾಗರಿಕ ಕೃತ್ಯ ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಹಗಲು ಹೊತ್ತಿನಲ್ಲೇ ಅದೂ ಕುಟುಂಬಸ್ಥರ ಸಮ್ಮುಖದಲ್ಲೇ ಕೊಲೆ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ಭಯದ ವಾತಾವರಣ ಮೂಡಿದೆ. ಜಾತಿ ವ್ಯವಸ್ಥೆಯ ಹೀನ ಕೃತ್ಯ ಇದಾಗಿದೆ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಬೇಕು. ಮೃತ ಬಸವರಾಜನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರದಿಂಧ ಆ ಕುಟುಂಬಕ್ಕೆ ನೆರವು ನೀಡಬೇಕು. ಸರ್ಕಾರಿ ಉದ್ಯೋಗ ಕೊಡಬೇಕೆಂದು ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಡಿವೈಎಸ್‌ಪಿ ಶ್ರೀಧರ ದಡ್ಡಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net