ಸೋಲಿನ ಹೊಣೆ ನಾನೇ ಹೊರುವೆ

dk
Published on

ಕನಕಪುರ  ತಾಲೂಕು ಅಭಿವೃದ್ಧಿಗೆ ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಸೋಲಿನಿಂದ ಕಾರ್ಯಕರ್ತರು, ಮುಖಂಡರು ಧೃತಿಗೆಡುವ ಅಗತ್ಯವಿಲ್ಲ. ಸೋಲಿನ ಭೀತಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಕುಂದಿಸಲು ಸಾಧ್ಯವಿಲ್ಲ. ಈ ಚುನಾವಣೆಯ ಫಲಿತಾಂಶಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ. ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ನಗರದ ಶಾಸಕ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮಹಾಯುದ್ಧದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಚುನಾವಣೆಯ ಸೋಲು ಅಂತ್ಯವಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಎಲ್ಲರೂ ಒಟ್ಟಾಗಿ ದುಡಿದು ಪಕ್ಷದ ಬಲವರ್ಧನೆಗೆ ಶ್ರಮಿಸೋಣ. ಈ ವಾತಾವರಣದಲ್ಲಿ ಕಾರ್ಯಕರ್ತರು ಅಸ್ಮಿತೆ ಕಳೆದುಕೊಂಡು ಬದುಕುವುದು ಬೇಡ. ಸ್ವಾಭಿಮಾನಿಗಳಾಗಿಯೇ ಹೋರಾಡೋಣ. ಈ ಚುನಾವಣೆಯಲ್ಲಿ ಆದ ಸೋಲು-ಗೆಲುವಿನ ಆತ್ಮಾವಲೋಕನದೊಂದಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ಮತ್ತಷ್ಟು ಅಭಿವೃದ್ಧಿಯತ್ತ ಮುಂದುವರಿಯೋಣ ಎಂದರು.

ಕಾರ್ಯಕರ್ತರು, ಮುಖಂಡರು ನನ್ನನ್ನು ಭೇಟಿಯಾಗಲು ಬೆಂಗಳೂರಿನವರೆಗೆ ಬರುವುದು ಬೇಡ. ವಾರದಲ್ಲಿ 2 ದಿನ ನಮ್ಮ ಕಚೇರಿಯಲ್ಲಿಯೇ ಭೇಟಿಯಾಗಲು ಬರುತ್ತೇನೆ. ಈ ಹಿಂದೆ ರಾಜ್ಯದ ಯಾವುದೇ ಶಾಸಕರು, ಸಚಿವರು ಮಾಡಲಾಗದ ಅಭಿವೃದ್ಧಿಯನ್ನು ಸಹೋದರ ಡಿ.ಕೆ.ಶಿವಕುಮಾರ್‌ರ ಮಾರ್ಗದರ್ಶನದಲ್ಲಿ ಮಾಡಿ ಅಭಿವೃದ್ಧಿಯ ಸಂತೃಪ್ತಿಯನ್ನು ನಾವು ಕಂಡಿದ್ದೇವೆ. ಈ ಅವಧಿಯಲ್ಲಿ ತಾಲೂಕಿನ ಜನತೆಗೆ ಅವಮಾನವಾಗುವ ಹಾಗೂ ಕೆಟ್ಟದ್ದನ್ನು ಮಾಡುವಂತೆ ನಾವು ನಡೆದುಕೊಂಡಿಲ್ಲ. ನಿಸ್ವಾರ್ಥ ಸೇವೆಯ ಮೂಲಕ ಗೌರವಯುತವಾಗಿಯೇ ನಡೆದುಕೊಂಡಿದ್ದರೂ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಬದಲಾವಣೆ ತಂದಿದ್ದೇವೆ. ನಿಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಾಮಾನ್ಯ ಸೇವಕನಾಗಿ ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ. ಸಮಸ್ಯೆಗೆ ಕಂಕಣಬದ್ಧನಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ತಾಲೂಕಿನ ಅಭಿವೃದ್ಧಿಗೆ ಕೊಟ್ಟ ಮಾತಿನಂತೆ ನಮ್ಮ ಶಕ್ತಿಮೀರಿ ದುಡಿದಿದ್ದೇವೆ. ಯಾವುದೇ ಕಾರಣಕ್ಕೂ ದ್ವೇಷ, ಅಸೂಯೆ ಮುಂತಾದವುಗಳಿಗೆ ಗಮನಕೊಡದೇ ಅಣ್ಣ-ತಮ್ಮಂದಿರು ಎಲ್ಲ ಸಮುದಾಯಗಳೊಂದಿಗೆ ವಿಶ್ವಾಸದಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದರು.

ಗಮನ ಸೆಳೆದಿದ್ದ ಕ್ಷೇತ್ರ  ತೀವ್ರ ಜಿದ್ದಾಜಿದ್ದಿನ ಹೋರಾಟದಿಂದ ಕೂಡಿದ್ದ ಈ ಕ್ಷೇತ್ರದಲ್ಲಿ ಈ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಮತ್ತು ಬಿಜೆಪಿಯವರು ನಡೆಸಿದ ಅಪಪ್ರಚಾರ ಮತ್ತು ಕುತಂತ್ರಗಳಿಂದ ಹಿನ್ನಡೆಯಾಗಿದೆ. ನನಗೆ ಇಷ್ಟೊಂದು ಕಡಿಮೆ ಮತಗಳು ಬರುತ್ತವೆ ಎಂಬ ವಿಶ್ವಾಸವಿರಲಿಲ್ಲ. ನಾನೇನೂ ದುರ್ಬಲ ಅಭ್ಯರ್ಥಿಯೂ ಆಗಿರಲಿಲ್ಲ. ನಾವು ಅಭಿವೃದ್ಧಿಯ ಮೂಲಕವೇ ಮತಯಾಚಿಸಿದ್ದೆವು. ವಿರೋಧಿಗಳು ರಣತಂತ್ರ ಹೆಣೆಯುವಲ್ಲಿ ಸಫಲರಾಗಿರುವುದೇ ಹಿನ್ನಡೆಗೆ ಪ್ರಮುಖ ಕಾರಣ. ಆದರೂ ಕ್ಷೇತ್ರದ ಮತದಾರರು ಹಿತೈಷಿಗಳಿಂದ ದೂರವಿರಬಾರದು ಎಂಬ ಕಾರಣಕ್ಕೆ ತಮಗೆ ಕೃತಜ್ಞತೆ ಅರ್ಪಿಸುತ್ತಿರುವುದಾಗಿ ಡಿ.ಕೆ ಸುರೇಶ್ ತಿಳಿಸಿದರು.

ಲೋಕಸಭಾ ಚುನಾವಣೆಯ ಫಲಿತಾಂಶದಿಂದ ನನಗೇನೂ ಬೇಜಾರಿಲ್ಲ. ಸಂಸದಗಿರಿ ಹೋಗಿರುವುದಕ್ಕೆ ಹತಾಶರಾಗುವುದು ಬೇಡ. ನಾನು ರಾಜಕೀಯ ಪ್ರವೇಶ ಮಾಡಿದಾಗಿನಿಂದಲೂ ಯಾವುದೇ ಜಾತಿ-ಧರ್ಮ, ಭೇದ-ಭಾವ ಮಾಡಿದವನಲ್ಲ. ಎಲ್ಲರೂ ನನ್ನ ಕುಟುಂಬದ ಸದಸ್ಯರೆಂದು ಭಾವಿಸಿ ರಾಜಕಾರಣ ಮಾಡಿದ್ದೇನೆ. ಈ ಸೋಲಿನಿಂದ ಕ್ಷೇತ್ರಬಿಟ್ಟು ಹೋಗುವ ಜಾಯಮಾನ ನಮ್ಮದಲ್ಲ. ಡಿ.ಕೆ ಸುರೇಶ್, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net