

ಮೂಡಿಗೆರೆ: ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಗುರುವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಭೂಮಾಪನಾ ಇಲಾಖೆ ಅಧಿಕಾರಿ ಕೆ.ಎಸ್.ಶಿವಕುಮಾರ್ ಬರೆದಿಟ್ಟಿದ್ದಾರೆನ್ನಲಾದ 5 ಪುಟದ ಡೆತ್‌ನೋಟ್ ಕಚೇರಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದ್ದು, ನನ್ನ ಸಾವಿಗೆ ಮೂವರು ಕಾರಣ ಎಂದು ಬರೆದಿದ್ದಾರೆ.
ಪಟ್ಟಣದ ಖಾಸಗಿ ಕಾಲೇಜ್‌ವೊಂದರ ಉಪನ್ಯಾಸಕಿಯೊಬ್ಬರ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದನ್ನು ಆಕೆ ರೆಕಾರ್ಡ್ ಮಾಡಿಕೊಂಡು ನನ್ನನ್ನು ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆ. ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕುನ್ನಳ್ಳಿ ಗ್ರಾಮದ ಜಾಗವೊಂದರ ಸರ್ವೇ ನಡೆಸಲು ನ್ಯಾಯಾಲಯ ನಿರ್ದೇಶನ ನೀಡಿತ್ತು. ಅದರಂತೆ ಶಿವಕುಮಾರ್ ಅವರು ಜಾಗದ ಸರ್ವೇ ನಡೆಸಿದ್ದರು. ಸರ್ವೇಯನ್ನು ಚೈನ್ ಬಳಸಿ ಮಾಡಿಲ್ಲ. ಜಿಪಿಎಸ್ ಸರ್ವೇ ನಡೆಸಿದ್ದಾರೆ. ಇದು ಅವೈಜ್ಞಾನಿಕ ಸರ್ವೇ ಎಂದು ಜಾಗದ ಮಾಲೀಕರು ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದ್ದರು. ಇದರಿಂದ ಮನನೊಂದಿದ್ದೇನೆ. ನನ್ನ ಸಾವಿಗೆ ಉಪನ್ಯಾಸಕಿ ಮತ್ತು ಕುನ್ನಳ್ಳಿ ಜಾಗದ ಮಾಲೀಕರಿಬ್ಬರು ಸೇರಿ ಮೂವರು ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
ಹಣಕ್ಕಾಗಿ ಬ್ಲಾೃಕ್‌ಮೇಲ್ ಮಾಡುತ್ತಿದ್ದ ಆಕೆಯ ಉಪಟಳ ಹೆಚ್ಚಾದಾಗ ಬುಧವಾರ ಕಚೇರಿಯಲ್ಲಿ ಕರ್ತವ್ಯದ ವೇಳೆ ಶಿವಕುಮಾರ್‌ತೀವ್ರವಾಗಿ ನೊಂದಿದ್ದರು. ಅವರನ್ನು ಕಚೇರಿ ಸಿಬ್ಬಂದಿ ಸಂಜೆ ತತ್ಕೊಳ ರಸ್ತೆಯ ಬಾಡಿಗೆ ಮನೆಯವರೆಗೂ ಕರೆದೊಯ್ದು ಬಿಟ್ಟು ಹೋಗಿದ್ದರು. ಗುರುವಾರ ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಹೋಟೆಲ್‌ನಲ್ಲಿ ಕಾಫಿ ಕುಡಿದು ಹೋಗಿದ್ದರು.
ಆತ್ಮಹತ್ಯೆಯ ಮುನ್ನಾದಿನ ಮೊಬೈಲ್ ಸಿಮ್‌ಕಾರ್ಡ್ ಬದಲಿಸಿದ್ದರು. ಆಕೆಯ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೇರೆ ನಂಬರ್ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಎಂಟು ವರ್ಷದಿಂದ ಮೂಡಿಗೆರೆಯ ಭೂಮಾಪನ ಇಲಾಖೆಯಲ್ಲಿ ಕಿರಿಯ ಶ್ರೇಣಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್, ತತ್ಕೊಳ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಶಿವಕುಮಾರ್ ಅವರ ಪತ್ನಿ ಮತ್ತು ಪುತ್ರಿ ಈ ಹಿಂದೆ ಮೂಡಿಗೆರೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಪುತ್ರಿ ಇಂಜಿನಿಯರಿಂಗ್ ಕಾಲೇಜ್ ಸೇರಿಕೊಂಡು ತಾಯಿಯೊಂದಿಗೆ ಬೆಂಗಳೂರಿಗೆ ತೆರಳಿದ ಬಳಿಕ ಶಿವಕುಮಾರ್ ಒಬ್ಬರೇ ಬಾಡಿಗೆ ಮನೆಯಲ್ಲಿದ್ದರು. ಅವರ ಪತ್ನಿ ಪುಷ್ಪಾ ನೀಡಿದ ದೂರಿನಂತೆ ಉಪನ್ಯಾಸಕಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.