

ನೆಲಮಂಗಲ: ತಾಲೂಕಿನ ಯಂಟಗಾನಹಳ್ಳಿಯ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದ ಮಂಗಳೂರು ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ತೆರವುಗೊಳಿಸದ ಟೋಲ್ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು-ಮಂಗಳೂರು ಹೆದ್ದಾರಿಗೆ ತಾಲೂಕಿನ ಕರೆಕಲ್‌ಕಲ್ ಕ್ರಾಸ್ ಬಳಿ ಲ್ಯಾಂಕೋದೇವಿಹಳ್ಳಿ ಕಂಪನಿಯಿಂದ ಟೋಲ್‌ಗೇಟ್ ನಿರ್ಮಿಸಿದ್ದು, ಹೊಸದಾಗಿ ನಿರ್ಮಿಸಿದ್ದ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಹಳೆಯ ಮಂಗಳೂರು ಹೆದ್ದಾರಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಇದರಿಂದ ಸ್ಥಳೀಯರ ಓಡಾಟಕ್ಕೆ ತೊಂದರೆಯಾಗಿತ್ತು.
ಅನಾನುಕೂಲದ ಹಿನ್ನೆಲೆಯಲ್ಲಿ ತಾಲೂಕಿನ ಹಂಚೀಪುರ, ಯಂಟಗಾನಹಳ್ಳಿ ಗ್ರಾಮಸ್ಥರು 2021 ಜೂನ್ 13ರಂದು ತಡೆಗೋಡೆಯನ್ನುತೆರವು ಮಾಡಿದ್ದರು. ಪುನಃ ಟೋಲ್ ಸಿಬ್ಬಂದಿ ಆ.16ರಂದು ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದರು.
ಸೋಮವಾರ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ತಡೆಗೋಡೆ ತೆರವುಗೊಳಿಸಲು ಮುಂದಾದರು. ಈ ವೇಳೆ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಟೋಲ್ ಸಿಬ್ಬಂದಿ, ಮೊದಲು ಗ್ರಾಮಸ್ಥರ ಜತೆ ಟೋಲ್ ಆಡಳಿತ ಮಂಡಳಿ ಸಭೆ ನಡೆಸಿ ನಿರ್ಣಯ ಕೈಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೆ ಎಲ್ಲರೂ ಒಮ್ಮತ ವ್ಯಕ್ತಪಡಿಸಿದರು.
ಮುಖಂಡರಾದ ರಮೇಶ್, ಅಂಜನಮೂರ್ತಿ, ಬಿ.ಎಂ.ರವಿಕುಮಾರ್, ಪ್ರಕಾಶ್, ಗ್ರಾಪಂಸದಸ್ಯ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.
ಆಹವಾಲು ಆಲಿಸಿದ ಎಂಎಲ್‌ಸಿ: ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ಸ್ಥಳೀಯರೊಂದಿಗೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. 8 ವರ್ಷಗಳ ಹಿಂದೆ ಗೂಬೆಕಲ್ಲಮ್ಮದೇವಾಲಯ ಪಕ್ಕದಲ್ಲಿ ದ್ವಿಚಕ್ರವಾಹನ ಸಂಚಾರಕ್ಕೆ ಜಾಗಬಿಟ್ಟು ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ನಿಯಮಾನುಸಾರ ಸುತ್ತಮುತ್ತಲ ಗ್ರಾಮಗಳ ಜನರ ವಾಹನ ಸಂಚಾರಕ್ಕೆ ಉಚಿತವಾಗಿ ಅವಕಾಶ ಮಾಡಿಕೊಡಬೇಕು. ಆದರೆ ಈಗ ಶುಲ್ಕ ಪಾವತಿಸಿ ಸಂಚರಿಸಬೇಕಾಗಿದೆ. ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಧಿಕಾರಿ, ತಹಸೀಲ್ದಾರ್, ಟೋಲ್ ಆಡಳಿತ ಮಂಡಳಿ, ಸಾರ್ವಜನಿಕರ ಸಭೆ ಕರೆದು ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಕಾಂತರಾಜು ತಿಳಿಸಿದರು.
ತಡೆಗೋಡೆ ತೆರವುಗೊಳಿಸಿದ್ದರರಿಂದ ಸ್ಥಳೀಯರ ವಾಹನಗಳ ಜತೆಗೆ ಹೊರಜಿಲ್ಲೆ ವಾಹನಗಳು ಅದೇ ರಸ್ತೆಯಲ್ಲಿ ಸಂಚರಿಸಲು ಆರಂಭಿಸಿದ್ದು, ಟೋಲ್ ಕಂಪನಿಗೆ ನಷ್ಟವಾಗುತ್ತಿರುವುದನ್ನು ಮನಗಂಡು ಮತ್ತೆ ತಡೆಗೋಡೆ ನಿರ್ಮಿಸಲಾಗಿದೆ. ಸ್ಥಳೀಯರು ವಾಹನಗಳ ದಾಖಲೆ ನಕಲು ಪ್ರತಿಗಳನ್ನು ಟೋಲ್ ಕಚೇರಿಗೆ ಕೊಟ್ಟು ನೋಂದಣಿ ಮಾಡಿಸಿಕೊಂಡಲ್ಲಿ ಉಚಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಕಿರಣ್, ಟೋಲ್ ಉಪವ್ಯವಸ್ಥಾಪಕ
ಸಮಸ್ಯೆ ಪಕ್ಷದ ವೇದಿಕೆಯಲ್ಲಿ ಇತ್ಯರ್ಥ: ತುರುವೇಕೆರೆಯಲ್ಲಿ ಇತ್ತೀಚೆಗೆ ಬೆಮೆಲ್ ಕಾಂತರಾಜು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದಿದ್ದ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂತರಾಜು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದ್ದರಿಂದ ಈ ರೀತಿ ಮಾತನಾಡಿರಬಹುದು. ಪಕ್ಷದ ನಾಯಕರಾದ ದೇವೇಗೌಡ ಹಾಗೂ ಎಚ್.ಡಿ.ಕುಮಾರ್‌ಣ್ಣ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು.ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದರು.