ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಪಟ್ಟು

SRP_02-01jpj
Published on

ಶ್ರೀರಂಗಪಟ್ಟಣ: ತಾಲೂಕಿನಿಂದ ಹಾದು ಹೋಗುತ್ತಿರುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್‌ಪ್ರೆಸ್ ಹೆದ್ದಾರಿಗೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಕೊಡದ ಹೊರತು ಕಾಮಗಾರಿ ಚಾಲನೆಗೆ ಅವಕಾಶ ನೀಡುವುದಿಲ್ಲ ಎಂದು ರಸ್ತೆ ನಿರ್ಮಾಣಕ್ಕೆ ಕೃಷಿ ಭೂಮಿ ನೀಡಿರುವ ರೈತರು ಪಟ್ಟು ಹಿಡಿದಿದ್ದಾರೆ.

ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ಕಾಮಗಾರಿ ತಡೆಹಿಡಿದಿರುವ ಶ್ರೀರಂಗಪಟ್ಟಣ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ಎಸ್ ಒಬಲೆ ಎದುರು ರೈತರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ನಿವಾರಿಸಿಕೊಡುವಂತೆ ಅಳಲು ತೋಡಿಕೊಂಡರು.

ರೈತ ಮುಖಂಡ ಸುನೀಲ್ ಮಾತನಾಡಿ, ಪ್ರಸ್ತುತ ತಾಲೂಕಿನಿಂದ ಇಲವಾಲದವರೆಗೂ ನಿರ್ಮಾಣವಾಗುತ್ತಿರುವ ಕುಶಾಲನಗರ ಎಕ್ಸ್‌ಪ್ರೆಸ್ ಹೈವೆಯ ರೂಪುರೇಷೆ ತಿಳಿಯದೆ ಈಗಾಗಲೇ ಭೂಮಿ ನೀಡಿದ್ದೇವೆ. ಇದೀಗ ಈ ರಸ್ತೆಗೆ ಸರ್ವೀಸ್ ರಸ್ತೆ ಮತ್ತು ಅಂಡರ್ ಪಾಸ್(ಕೆಳಸೇತುವೆ) ನೀಡದೆ ಕೇವಲ ಹೆದ್ದಾರಿ ಮಾತ್ರ ನಿರ್ಮಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಹೀಗಾದರೆ ಈ ಕಾಮಗಾರಿಯಿಂದ ಎಕ್ಸ್‌ಪ್ರೆಸ್ ಹೆದ್ದಾರಿ ಅಕ್ಕಪಕ್ಕದ ಗ್ರಾಮಗಳಾದ ಬೊಮ್ಮೂರು ಅಗ್ರಹಾರ, ಪಾಲಹಳ್ಳಿ, ಕಾರೇಕುರ, ಬೆಳಗೊಳ ಸೇರಿದಂತೆ ಹಲವು ಗ್ರಾಮಗಳ ರೈತರು ಜಮೀನಿಗೆ ತೆರಳಲು ರಸ್ತೆ ಇಲ್ಲದೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುವಂತಾಗುತ್ತದೆ. ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದೆ. ಬದಲಿ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ರೈತರನ್ನು ಸಮಾಧಾನಪಡಿಸಿ ಮಾತನಾಡಿ, ಈಗಾಗಲೇ ಹೆದ್ದಾರಿ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ಪ್ರಕಾರ ಡಿಪಿಆರ್ ಸಿದ್ಧಪಡಿಸಲಾಗಿದೆ. ಆ ಆಧಾರದಲ್ಲಿ ರೈತರಿಂದ ಭೂಮಿ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ. ಆದರೂ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆದರೆ, ಯಾರೂ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ತೊಂದರೆ ನೀಡಬೇಡಿ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ರೈತರು ತಮಗೆ ನ್ಯಾಯ ಒದಗಿಸಲೇಬೇಕು ಎಂದು ಪಟ್ಟುಹಿಡಿದರು. ಬಳಿಕ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು.

ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಶಾಂತಮಲ್ಲಪ್ಪ, ರೈತರಾದ ಅಶ್ವತ್ಥ್ ನಾರಾಯಣ್, ವಿಶ್ವನಾಥ್, ಸೋಮು, ದೀಪು, ಗೀರಿಶ್, ವಾಸಣ್ಣ, ರಘು, ಬಾಲು ಇತರರಿದ್ದರು.

ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 ರಸ್ತೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲನೆ ನಡೆಸಿದರು.

ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮ ಹಾಗೂ ಶ್ರೀರಂಗಪಟ್ಟಣ ತಾಲೂಕು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಪೂರ್ಣ ಒಳಚರಂಡಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದರು.

ತೂಬಿನಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ನಿರ್ಗಮನ ಕೇಂದ್ರದ ಬಳಿ ಅತೀ ಹೆಚ್ಚು ವಾಹನಗಳ ದಟ್ಟಣೆಯಾಗುತ್ತಿದ್ದು, ಇದರಿಂದಾಗಿ ನಿರಂತರವಾಗಿ ಹೆಚ್ಚಿನ ಅಪಘಾತ ಆಗುತ್ತಿರುವುದರಿಂದ ಚಾಲಕರು, ಪಾದಚಾರಿಗಳಿಗೆ ನಿಖರ ಹಾಗೂ ಸ್ಪಷ್ಟ ಸೂಚನೆ ನೀಡುವ ಸೂಚನಾ ಫಲಕಗಳ ಅಳವಡಿಸಬೇಕು. ಅಂಡರ್ ಪಾಸ್‌ಗಳಲ್ಲಿ ಚಾಲಕರಿಗೆ ವಾಹನ ಚಾಲನೆ ಸಮಯದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆಗೆ ಸೂಕ್ತ ಲೈಟಿಂಗ್ಸ್ ವ್ಯವಸ್ಥೆ, ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾದಚಾರಿ ಸೇತುವೆ ನಿರ್ಮಾಣ, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net