ಸರ್ವಾಂಗೀಣ ವಿಕಾಸವೇ ಗುರಿ

29kmr1
Published on

ಕಮಲನಗರ: ಔರಾದ್ ಹಾಗೂ ಕಮಲನಗರ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಮೂಲಸೌಕರ್ಯ ದೊರಕಿಸಿಕೊಡುವುದರ ಜತೆಗೆ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಗೆ ಹಗಲಿರುಳು ದುಡಿಯುತ್ತಿರುವೆ. ಕ್ಷೇತ್ರದ ಸರ್ವಾಂಗೀಣ ವಿಕಾಸವೇ ನನ್ನ ಏಕೈಕ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಮುಧೋಳ(ಬಿ) ಗ್ರಾಮದಲ್ಲಿ 2019-20ರ ಆರ್.ಐ.ಡಿಎಫ್-25 ಹೆಚ್ಚುವರಿ ಯೋಜನೆಯಡಿ 40 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯ ನೂತನ ಕಟ್ಟಡ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದ ಅವರು, ಕೋವಿಡ್ ನಿಂದಾಗಿ ಕೆಲ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು. ಆದರೀಗ ಕೆಲಸ ಆರಂಭಿಸಿದ್ದು, ಮಾರ್ಚ್ ವರೆಗೆ ಪೂರ್ಣಗೊಳಿಸಲಾಗುವುದು ಎಂದರು.

ಠಾಣಾಕುಶನೂರ ಹೋಬಳಿ ವ್ಯಾಪ್ತಿಯ ಲಿಂಗದಳ್ಳಿ, ಹಸ್ಸಿಕೇರಾ, ಗೌಡಗಾಂವ, ಕೋರೆಕಲ್, ಹಿಪ್ಪಳಗಾಂವ, ಠಾಣಾಕುಶನೂರ, ನಿಡೋದಾ, ಹಾಲಹಳ್ಳಿ, ಬಳತ್(ಕೆ), ಬಳತ್(ಬಿ), ಬೆಡಕುಂದಾ, ಲಕ್ಷ್ಮೀನಗರ, ಬೇಂಬ್ರಾ, ತೋರ್ಣಾ, ತೋರ್ಣಾ ವಾಡಿ, ಹೊಳಸಮುದ್ರ, ಸಾವಳಿ, ಬಸನಾಳ, ಕೋರ್ಯಾಳ್, ತಪಶ್ಯಾಳ, ಚಾಂದೋರಿ, ಮುಧೋಳ(ಕೆ) ಗ್ರಾಮಗಳಲ್ಲಿ ಶಾಲೆ, ಚರ್ಚ್, ಸ್ಮಶಾನ ಭೂಮಿ ಸುತ್ತುಗೋಡೆ ಹೀಗೆ ಸುಮಾರು 10 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಅಗತ್ಯವಿರುವ ಕಡೆ ಕುಡಿಯುವ ನೀರು, ಸಿಮೆಂಟ್ ರಸ್ತೆ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಗಿರೀಶ ಒಡೆಯರ್, ಜಿಪಂ ಸದಸ್ಯ ಮಾರುತಿ ಚವ್ಹಾಣ್, ಮಾಜಿ ಸದಸ್ಯ ವಸಂತ ಬಿರಾದಾರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಮುಖರಾದ ಸುರೇಶ ಭೋಸ್ಲೆ, ಅಮೃತರಾವ ವಟಗೆ, ವಿಠ್ಠಲರಾವ್ ಘಾಟೆ, ಶಾಲಿವಾನ ಉದಗೀರೆ, ಗೌತಮ ಅರಳಿ, ತಹಸೀಲ್ದಾರ್ ಎಂ.ಚಂದ್ರಶೇಖರ, ತಾಪಂ ಎಡಿ ಶಿವಾನಂದ ಔರಾದೆ, ಜೈಪಾಲ್ ರಾಠೋಡ್, ಪ್ರಶಾಂತ ಜಾಧವ್ ಇತರರಿದ್ದರು.

ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net