ಸರ್ವರ್ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

24rajesh1
Published on

ಚಾಮರಾಜನಗರ: ನ್ಯಾಯಬೆಲೆ ಅಂಗಡಿಗಳಲ್ಲಿ ತಲೆದೋರಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಬಿಪಿಎಲ್ ಕಾರ್ಡ್ ಸರ್ವೇಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಶ್ರೀಭುವನೇಶ್ವರಿ ವೃತ್ತದಲ್ಲಿ ತಮಟೆ ಚಳುವಳಿ ನಡೆಸಿದರು. ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆಯ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 500 ರೂ, ಸಂಪಾದನೆ ಮಾಡುತ್ತಿದ್ದ ಕೂಲಿಕಾರ್ಮಿಕರು 200 ರೂ. ಪಡಿತರಕ್ಕೆ ಕಾದು ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸರ್ವರ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಒಂದು ಕಡೆ ಸೌಲಭ್ಯ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಳ್ಳುತ್ತಿದೆ. ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್‌ಸರ್ವೇಯನ್ನು ಆರಂಭಿಸಿದ್ದು, ಬಿಪಿಎಲ್ ಕಾರ್ಡ್ ರದ್ದು ಪಡಿಸಲು ಮುಂದಾಗಿದೆ. ಸರ್ಕಾರ ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕು. ತೆರಿಗೆ ಕಟ್ಟುವವರು ಹಾಗೂ ಸರ್ಕಾರಿ ನೌಕರರನ್ನು ಹೂರತು ಪಡಿಸಿ ಉಳಿದ ಪ್ರತಿಯೊಬ್ಬ ನಾಗರಿಕರಿಗೂ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರರಾದ ನಿಜಧ್ವನಿ ಗೋವಿಂದರಾಜು, ಪಣ್ಯದುಂಡಿ ರಾಜು, ಸೋಮನಾಯಕ, ರಾಜಗೋಪಾಲ್, ಮಹೇಶ್‌ಗೌಡ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net