

ಅರಸೀಕೆರೆ: ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಕರಿಗೆ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ವಿಭಾ ವಿ.ರಾಥೋಡ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಿಕ್ಕಗಂಡಸಿ ನಾಗರಾಜ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಾವಳಿ ಅನುಸಾರ ಗ್ರಾಹಕರಿಂದ ಎರಡು ಬಾರಿ ಪ್ರತ್ಯೇಕ ಬಯೋಮೆಟ್ರಿಕ್ ಪಡೆಯಬೇಕಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ಹೇಳತೀರದಾಗಿದ್ದು ಕೂಲಿ ಕೆಲಸಕ್ಕೆ ತೆರಳುವವರಿಗೆ ಸಕಾಲದಲ್ಲಿ ಪಡಿತರ ನೀಡಲು ಸಾಧ್ಯವಾಗದ ಕಾರಣ ವಾಗ್ವಾದಕ್ಕೆ ಕಾರಣವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವಂತೆ ಯಾವುದೋ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಅಪಪ್ರಚಾರ ಮಾಡಿದರೆ ಅದರ ಫಲವನ್ನು ನಾವು ಅನುಭವಿಸುವಂತಾಗಿರುವುದು ದುರದೃಷ್ಟಕರ. ಉಭಯ ಸರ್ಕಾರಗಳು ವಾಸ್ತವ ಮನಗಂಡು ಲೋಪ ಸರಿಪಡಿಸಿ ಪಡಿತರ ವಿತರಕರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಬಾಣಾವರ ಜಯಣ್ಣ ಮಾತನಾಡಿ, ಪಡಿತರ ಮಾರಾಟದ ಕಮಿಷನ್ ನೀಡಿ ತಿಂಗಳುಗಳೇ ಕಳೆದಿದ್ದು ಜೀವನ ನಡೆಸುವುದೇ ದುಸ್ತರವಾಗಿದೆ. ಪರಿಸ್ಥಿತಿ ಹೀಗಿದ್ದರೂ ಪದೇ ಪದೆ ಗದಾಪ್ರಹಾರ ನಡೆಸುತ್ತಿರುವುದು ನೋವು ತಂದಿದೆ ಎಂದು ಹೇಳಿದರು. ಬಾಣಾವರ ಉಮೇಶ್, ಕೋರನಹಳ್ಳಿ ಆನಂದ್ ಇದ್ದರು.