ಸರ್ವರಿಗೂ ಸಮಾನ ಆರೋಗ್ಯ ಸೇವೆ ಲಭಿಸಲಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್

mysore
Published on

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿರುವವರು ಸಮಾನತೆ, ನ್ಯಾಯಪರತೆ, ಮಾನವೀಯ ತತ್ವ ಅನುಸರಿಸಿ ನೆಮ್ಮದಿಯ ನಾಳೆಗಳನ್ನು ನಿರ್ಮಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.

ಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಶುಕ್ರವಾರ ಆಯೋಜಿಸಿದ್ದ 15ನೇ ಘಟಿಕೋತ್ಸವದಲ್ಲಿ ಮಾತನಾಡಿ, ವೈದ್ಯರು, ದಂತ ವೈದ್ಯರು, ಶುಶ್ರೂಷಕರು, ಆಡಳಿತಾಧಿಕಾರಿಗಳು ಆರೋಗ್ಯ ಸೇವೆಯನ್ನು ಎಲ್ಲರಿಗೂ ಸರಿ ಸಮಾನವಾಗಿ ಕಲ್ಪಿಸಿಕೊಡುವುದೇ ಪರಮೋಧರ್ಮ ಆಗಿರಬೇಕು. ಮಾನವೀಯತೆ, ಉದಾರತೆ, ಕರುಣೆ, ನಾವು ಬದುಕುವ ಲೋಕವನ್ನು ಸುಂದರವಾಗಿ ಕಟ್ಟಿಕೊಡುತ್ತದೆ ಎಂದರು.

ಸೇವೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಾನಮಾನ, ವ್ಯಕ್ತಿಯ ಹಿನ್ನೆಲೆ ಯಾವುದೂ ಮುಖ್ಯವಾಗಬಾರದು. ಸಂವಿಧಾನವು ನ್ಯಾಯ, ಸಮಾನತೆಯನ್ನೂ ಎಲ್ಲ ನಾಗರಿಕರಿಗೂ ಕಲ್ಪಿಸಿಕೊಟ್ಟಿದೆ. ಉನ್ನತ ಶಿಕ್ಷಣ ಪಡೆದವರು ಈ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವಕಾಶ ಎಲ್ಲರಿಗೂ ದೊರೆಯಬೇಕು. ಅಂಗವಿಕಲ ಎಂಬ ಕಾರಣಕ್ಕೆ ವೈದ್ಯಕೀಯ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗೆ ಮರುಪರೀಕ್ಷೆ ಬರೆಯುವ ಅವಕಾಶವನ್ನು ಸುಪ್ರೀಂ ಕೋರ್ಟ್ ಕಲ್ಪಿಸಿಕೊಟ್ಟಿತ್ತು. ಇದು ಸಂವಿಧಾನದ ಆಶಯ. ಮಾನವೀಯತೆಯಿಂದ ಪ್ರತಿಯೊಬ್ಬ ಪ್ರಜೆಯನ್ನೂ ಕಾಣಬೇಕಿದೆ ಎಂದರು.

ಉನ್ನತ ಶಿಕ್ಷಣ ಪೂರೈಸಿದ ಪದವೀಧರರು ವೈಯಕ್ತಿಕ ಪ್ರಗತಿಗಿಂತಲೂ ಎಲ್ಲರ ಭವಿಷ್ಯಕ್ಕಾಗಿ ಸೇವೆ ಮಾಡಬೇಕು. ತಲೆಮಾರಿನಿಂದ ಪಡೆದ ಜ್ಞಾನ, ಅನುಭೂತಿ, ಕೌಶಲವನ್ನು ಮುಂದಿನ ಪೀಳಿಗೆ ಮತ್ತು ಸಮುದಾಯಕ್ಕೆ ವರ್ಗಾಯಿಸಬೇಕು. ಇದುವೇ ನಿಜವಾದ ವೃತ್ತಿಪರತೆ. ಈ ಮೂಲಕ ಜೀವನಚಕ್ರ ಪೂರೈಸಬೇಕು ಎಂದು ತಿಳಿಸಿದರು.

ಕರೊನಾ ಕಾಲದಲ್ಲಿ ಶೇ.20ರಷ್ಟು ಮುಂದುವರಿದ ದೇಶಗಳು ಶೇ.54(460 ಕೋಟಿ)ರಷ್ಟು ಲಸಿಕೆ ಪಡೆದುಕೊಂಡಿದ್ದವು. ಶೇ.47ರಷ್ಟಿರುವ ಅಭಿವೃದ್ಧಿಶೀಲ ದೇಶಗಳಿಗೆ ಶೇ.12ರಷ್ಟು ಪ್ರಮಾಣದ ಲಸಿಕೆ ಸಿಕ್ಕಿತ್ತು. ಇದು ನ್ಯಾಯ ಸಮ್ಮತವಲ್ಲ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ದೇಶದ ಎಲ್ಲರಿಗೂ ಲಸಿಕೆ ಉಚಿತವಾಗಿ ದೊರೆಯುವಂತೆ ಮಾಡಿತು ಎಂದು ಸ್ಮರಿಸಿಕೊಂಡರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಲು ಸತತ ಪ್ರಯತ್ನ ಮುಂದುವರಿಸಬೇಕು. ತ್ಯಾಜ್ಯ ಸಂಸ್ಕರಣೆ, ಪರಿಸರ ಸ್ನೇಹಿ ಚಟುವಟಿಕೆಯಂತಹ ಸಣ್ಣ ಪ್ರಯತ್ನಗಳು ದೇಶವನ್ನೇ ಪರಿವರ್ತನೆ ಮಾಡುತ್ತದೆ ಎಂದರು.

ರಷ್ಯ-ಊಕ್ರೇನ್, ಇಸ್ರೇಲ್-ಗಾಜಾ, ಆಫ್ರಿಕಾದಲ್ಲಿ ಯುದ್ಧ ಉಲ್ಬಣಿಸಿದೆ. ಇದರಿಂದ ಅನೇಕ ಜಾಗತಿಕ ಸವಾಲುಗಳು ಸೃಷ್ಟಿಯಾಗಿವೆ. ಯುದ್ಧದಲ್ಲಿ ಪ್ರಾಣ ಲೆಕ್ಕಿಸದೆ ಆರೈಕೆ ಮಾಡಿದ ಫ್ಲಾರೆನ್ಸ್ ನೈಟಿಂಗೇಲ್ ಅವರು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಮಾದರಿ ಮತ್ತು ಆದರ್ಶವಾಗಬೇಕಿದೆ ಎಂದರು.

‘ಜಗತ್ತನ್ನು ಪರಿವರ್ತನೆ ಮಾಡುವ ಶಕ್ತಿಶಾಲಿ ಅಸ್ತ್ರ ಶಿಕ್ಷಣ’ ಎಂದು ಆಫ್ರಿಕಾದ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾನತೆಯ ಹರಿಕಾರ ನೆಲ್ಸನ್ ಮಂಡೇಲಾ ಅವರ ಪ್ರತಿಪಾದನೆಯಾಗಿತ್ತು. ಆದ್ದರಿಂದ ಪ್ರತಿಯೊಬ್ಬರ ಈ ಸಾಧನೆ ವೈಯಕ್ತಿಕವಲ್ಲ, ಅದು ದೇಶದ್ದಾಗಿರುತ್ತದೆ ಎಂದು ಹೇಳಿದರು.

ಅಸ್ಸಾಂ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗದ ವಿದ್ಯಾರ್ಥಿಗಳು ಪ್ರಾದೇಶಿಕ ವೈವಿಧ್ಯವಷ್ಟೇ ಅಲ್ಲ, ದೇಶವನ್ನು ಮುನ್ನೆಡೆಸುವ ಚಲನಶಕ್ತಿಯಾಗಿದ್ದಾರೆ. ಇದು ಪೂರ್ಣಪ್ರಮಾಣದಲ್ಲಿ ಸದ್ಬಳಕೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪದವಿ, ಡಿಪ್ಲೊಮಾ ಸೇರಿದಂತೆ 2,795 ಪದವೀಧರ ವಿದ್ಯಾರ್ಥಿಗಳು ಪ್ರಮಾಣಪತ್ರ ಸ್ವೀಕರಿಸಿದರು. ಒಬ್ಬರಿಗೆ ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್), 104 ಅಭ್ಯರ್ಥಿಗಳಿಗೆ ಪಿಎಚ್.ಡಿ, 56 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 75 ಪದಕಗಳು ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕುಲಪತಿ ಡಾ.ಎಚ್.ಬಸವನಗೌಡಪ್ಪ, ಸಮಕುಲಾಧಿಪತಿ ಡಾ.ಬಿ.ಸುರೇಶ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಕುಲಸಚಿವ ಡಾ.ಬಿ.ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net