ಸರ್ವರಿಗೂ ಒಳಿತನ್ನೇ ಬಯಸಿ

IMG-20241229-WA0246
ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರಾದ ನಿಡನೂರು ಗ್ರಾಮದ ಭಾಗ್ಯಾ ತೀರ್ಥಸಂಗಪ್ಪ ಹಾಗೂ ಕುಟುಂಬ ವರ್ಗದವರಿಂದ ಭಾನುವಾರ ತುಲಾಭಾರ ಸೇವೆ ನಡೆಯಿತು.
Published on

ಆಲೂರು: ಪ್ರತಿಯೊಬ್ಬರೂ ಇತರರಿಗೆ ಪ್ರತಿ ಕ್ಷಣ ಒಳಿತನ್ನೇ ಬಯಸಬೇಕು. ಆಗಾದಾಗ ಮಾತ್ರ ಭಗವಂತ ಅವರಿಗೂ ಒಳ್ಳೆಯದನ್ನೇ ಕರುಣಿಸುತ್ತಾನೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಭಾನುವಾರ ಸದ್ಭಕ್ತರಿಂದ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಾತಾಪಿತೃಗಳು ಹಾಗೂ ಸ್ವಾಮೀಜಿಗಳ ತುಲಾಭಾರ ಕಾರ್ಯಕ್ರಮದಿಂದ ಪುಣ್ಯಸಾಧನೆ ಲಭಿಸಲಿದೆ. ತುಲಾಭಾರವೆಂದರೆ ಎಲ್ಲವೂ ಸ್ವಾಮಿಗಳ ಮೂಲಕವಾಗಿ ಭಗವಂತನಿಗೆ ಸಮರ್ಪಿತವಾಗುವುದು. ನಾನು ಎಂಬ ಅಹಂ ಭಾವ ದೂರವಾಗಿ ಎಲ್ಲವೂ ನಿನ್ನದೇ ಎನ್ನುವ ಭಾವ ಮೂಡುತ್ತದೆ. ಇದರಿಂದಾಗಿ ದೇವರು ಕೊಟ್ಟಿದ್ದು ದೇವರಿಗೆ ಸಲ್ಲಿತು ಎನ್ನುವ ಸಂತೃಪ್ತಿ ಬರುತ್ತದೆ. ಇದು ಕೆಲವರ ಜೀವನದಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಹೇಳಿದರು.

ಯಾರೂ ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಮಾನವ ಜನ್ಮವನ್ನು ವ್ಯರ್ಥ ಕಾಲ ಹರಣದಲ್ಲಿ ಕಳೆಯದೇ ನಿತ್ಯ, ಜಪ, ತಪ, ದಾನ, ಧರ್ಮ, ದಾಸೋಹ, ಅಧ್ಯಾತ್ಮ ಚಿಂತನೆಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗೆ ಶ್ರೀಮಠದ ಭಕ್ತರಾದ ನಿಡನೂರು ಗ್ರಾಮದ ಭಾಗ್ಯಾ ತೀರ್ಥಸಂಗಪ್ಪ ಹಾಗೂ ಕುಟುಂಬ ವರ್ಗದವರಿಂದ ತುಲಾ ಭಾರ ಸೇವೆ ನಡೆಯಿತು. ಶ್ರೀ ಮಠದ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಹಾಗೂ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ ಮೂರ್ತಿಗೆ ನಾಣ್ಯದ ತುಲಾಭಾರ ನಡೆಯಿತು. ಬಳಿಕ ಅನ್ನಸಂತರ್ಪಣೆ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಎಸ್. ಎಸ್ ಶಿವಮೂರ್ತಿ ಸಿದ್ದಾಪುರ, ಪುರೋಹಿತರಾದ ದೇವರಾಜ ಶಾಸ್ತ್ರಿ, ಆಲೂರು ಟಿಎಪಿಸಿಎಂಎಸ್ ವ್ಯವಸ್ಥಾಪಕ ಉಮೇಶ್, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ಕಾರ್ಜುವಳ್ಳಿ ಗ್ರಾಮಸ್ಥ ಯಶ್ವಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net