ಸರ್ವರನ್ನೂ ಸಮಭಾವದಿಂದ ಕಾಣುತ್ತಿದ್ದ ಶ್ರೀಗಳು

20Rajesh1
Published on

ಚಾಮರಾಜನಗರ: ಶರಣರ ಕಾಯಕ ತತ್ವನಿಷ್ಠೆಯಂತೆ ಸಕಲರಿಗೂ ಲೇಸು ಬಯಸುವ, ಸರ್ವರನ್ನೂ ಸಮಭಾವದಿಂದ ಕಾಣುತ್ತಿದ್ದ ಹಿರಿಯ ಶ್ರೀಗಳು ಲಿಂಗೈಕ್ಯರಾದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ಧ ಸಾಲೂರು ಬೃಹನ್ಮಠದ 18ನೇ ಶ್ರೀಗಳಾದ ಪಟ್ಟಗು ಗುರುಸ್ವಾಮಿ ಮಂಗಳವಾರ ಮುಂಜಾನೆ 5 ಗಂಟೆಗೆ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇದ್ದ ಹಿನ್ನೆಲೆಯಲ್ಲಿ ಮಠಕ್ಕೆ ಶ್ರೀಗಳನ್ನು ಕರೆತರಲಾಗಿತ್ತು. ಅಂತಿಮವಾಗಿ ಮಂಗಳವಾರ ಮುಂಜಾನೆ ಇಹಲೋಕ ತ್ಯಜಿಸಿದರು.

ಭಕ್ತರಿಗಾಗಿ ದುಡಿದ ಶ್ರೀಗಳು:1956ರ ಆಗಸ್ಟ್ 2ರಂದು ಹನೂರು ತಾಲ್ಲೂಕಿನ ಗ್ರಾಮದಲ್ಲಿ ಜನಿಸಿದ ಪೂಜ್ಯಪಾದರು ಸಂಚರಿಸಿದ ಸ್ಥಳವಿಲ್ಲ, ಲಿಂಗ ಪೂಜೆ ಮಾಡದ ಬೆಟ್ಟ ಗುಡ್ಡಗಳಿಲ್ಲ, ಮಾತನಾಡಿಸದ ಭಕ್ತರುಗಳಿಲ್ಲ, ಗಂಗಾಧರನ ಕಟ್ಟೆ ಹೊಸೂರು ಗ್ರಾಮದ ರುದ್ರಪ್ಪ ಮತ್ತು ಶರಣೆ ಪುಟ್ಟಮಾದಮ್ಮ ದಂಪತಿಯ ನಾಲ್ಕನೇ ಪುತ್ರರಾಗಿ ಜನಿಸಿದು.

ಮಹದೇಶ್ವರ ಬೆಟ್ಟದ ಶ್ರೀ ಸಾಲೂರುಸ್ವಾಮಿ ಮಠಕ್ಕೊಂದು ಅನನ್ಯ ಗಣ್ಯವಾದ ಸ್ಥಾನವಿದೆ. 1995ರ ಜ.29ರಂದು ಶ್ರೀ ಸಾಲೂರು ಮಠದ ಪೀಠಾಧಿಪತಿಯಾದರು. ಪಟ್ಟದ ಗುರುಸ್ವಾಮಿಗಳು ಶ್ರೀ ಮಠದ ಜವಾಬ್ದಾರಿ ದಾಸೋಹ ವ್ಯವಸ್ಥೆ, ಕೃಷಿ ಮುಂತಾದ ಕೆಲಸ ಕಾವ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಲಾಯಿತು.

ಕರ್ನಾಟಕದ ದಕ್ಷಿಣ ಪ್ರಾಂತ್ಯ ಹಾಗೂ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿರುವ ಸಾವಿರಾರು ಭಕ್ತರಲ್ಲಿ ಗುರುಸ್ವಾಮಿ ಬುದ್ಧಿಯವರು ಎಂಬ ಗೌರವ ಪಡೆದು ಭಕ್ತ ಜನ ಮನ ಹೃದಯವನ್ನು ಗೆದ್ದುಕೊಂಡರು. ಪೂಜ್ಯಪಾದರು ಸಂಚರಿಸಿದ ಸ್ಥಳಗಳಿಲ್ಲ, ಲಿಂಗ ಪೂಜೆ ಮಾಡದ ಬೆಟ್ಟ ಗುಡ್ಡಗಳಿಲ್ಲ, ಮಾತನಾಡಿಸದ ಭಕ್ತರಿಲ್ಲ. ಎಪ್ಪತ್ತೇಳು ಮಲೆಗಳನ್ನು ಸುತ್ತಿರುವ ಕೀರ್ತಿ ಹಿರಿಮೆ ಇವರದ್ದು. ಇಲ್ಲಿ ವಾಸವಾಗಿರುವ ಜನ ಸಮುದಾಯದವರ ಹೆಸರನ್ನು ಸರಾಗವಾಗಿ ಹೇಳಬಲ್ಲವರಾಗಿದ್ದರು. ಶ್ರೀಸಿದ್ದಗಂಗಾ ಮಠಾಧ್ಯಕ್ಷ ಶ್ರೀಶಿವಕುಮಾರ ಮಹಾಸ್ವಾಮಿಗಳು ಮತ್ತು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ದೇಗುಲ ಮಠಾಧ್ಯಕ್ಷ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಕೃಪಾಶೀರ್ವಾದವನ್ನು ಬದುಕಿನ್ನೂದ್ದಕ್ಕೂ ಅನುಸರಿಸಿದ್ದರು.

ಭಕ್ತರ ಮನೆಗಳಿಗೆ ಭೇಟಿ:

ಬೆಟ್ಟಗುಡ್ಡಗಳ ಸಾಲಿನಲ್ಲಿರುವ ಭಕ್ತರ ಮನೆಗಳಿಗೆ ತೆರಳಿ ಪೂಜಾ ಪುನಸ್ಕಾರಗಳನ್ನು ಮಾಡುತ್ತಿದ್ದರು.

ಎಲ್ಲ ಧಾರ್ಮಿಕ ವಿಧಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಪವಾಡ ಪುರುಷ ಶ್ರೀಮಲೆ ಮಹದೇಶ್ವರರ ಪಾದಸ್ಪರ್ಶ ಮಾಡಿದ ಸ್ಥಳಗಳಲ್ಲಿ ನಡೆಯುವ ಪರಿಷೆ, ಜಾತ್ರೆ, ಶುಭಕಾರ್ಯಗಳಲ್ಲಿ ತಾವೇ ಸಾಮಾಗ್ರಿಗಳನ್ನು ಪೂರೈಸಿ ಅರ್ಚಕರ ಸಂಭ್ರಮದಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಶ್ರೀಕ್ಷೇತ್ರದ ಸುತ್ತಲಿನ 50 ಕಿ.ಮೀ. ದೂರದ 77 ಮಲೆಗಳಲ್ಲಿ ಸಂಚರಿಸಿದ್ದರು. ಸುತ್ತಲಿನ ಹಳ್ಳಿಗಳಿಗೂ ಭೇಟಿ ನೀಡಿ, ಅವರಿಗೆ ಧರ್ಮ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಎಲ್ಲ ಪಕ್ಷಗಳ ರಾಜಕಾರಣಿಗಳ ಒಡನಾಟವನ್ನು ಹೊಂದಿದ್ದರು. ಕ್ಷೇತ್ರಕ್ಕೆ ಬರುತ್ತಿದ್ದ ನಾಯಕರು ಶ್ರೀಮಠಕ್ಕೆ ಆಗಮಿಸಿ ಹಿರಿಯ ಶ್ರೀಗಳ ಆಶೀರ್ವಾದ ಪಡೆದು ಹೋಗುತ್ತಿದ್ದರು.

ಗುರುಸ್ವಾಮಿಗಳಿಂದ ಅಭಿವೃದ್ಧಿ ಮಂತ್ರ:

ಶ್ರೀಮಠದ ಹಿರಯ ಶ್ರೀಗಳಾದ ಪಟ್ಟದ ಗುರುಸ್ವಾಮಿಗಳು ನಿತ್ಯ ದಾಸೋಹ ಸೇವೆ, ಶ್ರೀಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಪೊನ್ನಾಚಿಯಲ್ಲಿ ಗಿರಿಜನ, ದೀನ ದಲಿತರ ಹಿಂದುಳಿದವರ ಉಳಿವಿಗಾಗಿ ಶ್ರಮಿಸಿದ್ದರು. ಪ್ರೌಢಶಾಲೆ ಮತ್ತು ಉಚಿತ ವಸತಿ ಶಾಲೆಯನ್ನು ಸ್ಥಾಪನೆ ಮಾಡಿದರು.1999ರಲ್ಲಿ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದಲ್ಲಿ ಪ್ರೌಢಶಾಲೆ, ಹನೂರಿನಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ವೃದ್ದಾಶ್ರಮವನ್ನು ಸ್ಥಾಪಿಸಿದರು. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಹಲವಾರು ಸಂಸ್ಕೃತ ಪಾಠಶಾಲೆಗಳನ್ನು ತೆರೆದರು. ಮಠದ ಎದುರಿನ ಗವಿಯ ಅಭಿವೃದ್ಧಿ, ನಿತ್ಯ ಪೂಜೆ ಮುಂತಾದ ಭಕ್ತರ ಕೈಂಕರ್ಯಗಳನ್ನು ಮಾಡಿದ್ದಾರೆ. ಶ್ರೀಮಠಕ್ಕಾಗಿ ಅವಿರತವಾಗಿ ದುಡಿಯುತ್ತಿದು ಸಾವಿರಾರು ಮೈಲಿಗಳು ಸಂಚಾರ ಮಾಡಿದ್ದರು. ಭಕ್ತಾದಿಗಳ ಮನೆ ಮನೆಗೆ ಭೇಟಿ ನೀಡಿ ದವಸ ಧಾನ್ಯಗಳನ್ನು ಸಂಗ್ರಹಿಸಿ, ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿ ಸೌಲಭ್ಯ ಒದಗಿಸಿದ್ದರು.

ಅಜಾತ ಶತ್ರುವನ್ನು ಕಾಡಿನ ನೋವು:

ಪಟ್ಟದ ಗುರುಸ್ವಾಮಿ ಯಾರಿಗೂ ನೋವುಂಟು ಮಾಡದ ಅಜಾತಶತ್ರು. ಆದರೆ ಅವರನ್ನು ಸುಳವಾಡಿ ವಿಷ ಪ್ರಸಾದ ಪ್ರಕರಣ ನೋವುಂಟು ಮಾಡಿತ್ತು. ಜನರ ಸಾವು-ನೋವುಗಳು, ಅನ್ಯಾಯವನ್ನು ಕಂಡು ದುಃಖಿಸಿದ್ದರು. ಈ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಒಂದಲ್ಲ, ಏಳು ಬಾರಿ ಸಾವಿನ ಬಾಗಿಲು ತಟ್ಟಿ ಬಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ 2020ರ ಆ.8ರಂದು ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಸೋಂಕು ತಗುಲಿ ಬದುಕುವುದೇ ಅನುಮಾನವಾಗಿತ್ತು. ಶ್ರೀಮಠದ ಕಿರಿಯ ಶ್ರೀಗಳಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಅತೀವ ಕಾಳಜಿಯಿಂದ ಚಿಕಿತ್ಸೆ ಪಡೆದು ಗುಣವಾಗಿದ್ದರು.

ಶ್ರೀಮಠದ 18ನೇ ಪೀಠಾಧಿಪತಿ

ಸಾಲೂರು ಮಠದಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನವಿದೆ. ಪೀಠಾಧಿಪತಿಗಳಿಗೂ ಗುರು ಗೌರವವಿದಿದೆ. ಶ್ರೀಮಠದ ಮೊದಲ ಶ್ರೀಗಳು ಸಾಲೂರು ಸ್ವಾಮೀಜಿ, ಬಳಿಕ ಶಾಂತಲಿಂಗಸ್ವಾಮೀಜಿ, ಇಮ್ಮಡಿ ಸಾಲೂರು ಸ್ವಾಮೀಜಿ(ಪ್ರಭಾರ), ಕರಿಬಸವ ದೇವರು, ಮುದ್ದುವೀರ ಸ್ವಾಮೀಜಿ, ಶಾಂತದೇವರು, ನಂಜೇದೇವರು, ಕೆಂಪನಂಜ ಸ್ವಾಮೀಜಿ, ಸಿದ್ದವೀರ ಸ್ವಾಮೀಜಿ, ಗುಂಡೇಗಾಲದ ಸ್ವಾಮೀಜಿ, ಚನ್ನೂರಿನ ಸ್ವಾಮೀಜಿ, ದೇವರಹಳ್ಳ ಸ್ವಾಮೀಜಿ, ಸಿದ್ದವೀರ ಸ್ವಾಮೀಜಿ, ಬೆಳತೂರು ಕೆಂಪನಂಜಸ್ವಾಮೀಜಿ, ಇಮ್ಮಡಿ ಶಾಂತಲಿಂಗ ಸ್ವಾಮೀಜಿ, ಇಮ್ಮಡಿ ಮುದ್ದುವೀರ ಸ್ವಾಮೀಜಿ, ಮಹಾದೇವಸ್ವಾಮೀಜಿ, ಪಟ್ಟದ ಗುರುಸ್ವಾಮೀಜಿ ಪೀಠಾಧಿಪತಿಯಾದರು. ಇವರ ಉತ್ತರಾಧಿಕಾರಿಯಾಗಿ ಪ್ರಸ್ತುತ ಡಾ.ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ ಶ್ರೀಮಠದ ಸೇವೆಗೈಯುತ್ತಿದ್ದಾರೆ.

ದುಃಖದಲ್ಲಿ ಉಳುಗಿದ ಭಕ್ತ ಸಮೂಹ:

ಹಿರಿಯಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಶ್ರೀಮಠದ ಭಕ್ತ ಸಮೂಹ ದುಃಖದಲ್ಲಿ ಮುಳುಗಿದೆ. ಅದರಲ್ಲೂ ಮಠದ ಪೀಠಾಧಿಪತಿ ಡಾ.ಶಾಂತಮಲ್ಲಿಕಾರ್ಜುನಸ್ವಾಮೀಜಿ ತನ್ನ ಗುರು, ತಂದೆ ಸಮಾನರಾದವರನ್ನು ಕಳೆದುಕೊಂಡು ಕಣ್ಣೀರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net