ಸರ್ವರನ್ನು ಒಳಗೊಳ್ಳುವಲ್ಲಿ ದೇಶದ ರಕ್ಷಣೆ ಅಡಗಿದೆ

Samvidhana
Published on

ಚಿತ್ರದುರ್ಗ: ರಾಷ್ಟ್ರದ ಚುಕ್ಕಾಣಿ ಹಿಡಿಯುವವರು ಸದ್ಗುಣ ಸಂಪನ್ನರಾಗಿರಬೇಕು. ಸರ್ವರನ್ನು ಒಳಗೊಳ್ಳುವ ಗುಣ ಹೊಂದಿರಬೇಕು. ಇಲ್ಲದಿದ್ದರೆ, ಸಂವಿಧಾನವೂ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಕೋಟೆನಾಡು ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ಸೇರಿ ಮಹನೀಯರ ಆಶಯ ಉಳಿಯಲು ಸರ್ವರಿಗೂ ಸಮಾನತೆ ಸಾರಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಅವಶ್ಯಕತೆ ಇದೆ. ಸರ್ವರಿಗೂ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನ ಅವಕಾಶ ಖಾತ್ರಿ ಪಡಿಸಿದಾಗ ಮಾತ್ರ ದೇಶ ಪ್ರಜ್ವಲಿಸಲಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ ಮಾತನಾಡಿ, ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ವಿಚಾರವಾದಿಗಳು ಮುಕ್ತವಾಗಿ ಮಾತನಾಡಲು ಆಗುತ್ತಿಲ್ಲ. ಯುವಸಮೂಹಕ್ಕೆ ಉದ್ಯೋಗಗಳು ಸಿಗುತ್ತಿಲ್ಲ. ಮೀಸಲಾತಿ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ. ಇನ್ನೂ ಅನೇಕ ಕಾರಣಗಳಿಂದಾಗಿ ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಮೂಲ ಆಶಯಗಳೇ ಈಡೇರುತ್ತಿಲ್ಲ ಎಂದು ಬೇಸರಿಸಿದರು.

ದೇಶದಲ್ಲಿ ದೇಗುಲಗಳಿಗೆ ನೀಡುವಷ್ಟು ದಾನ-ಧರ್ಮ, ಶಾಲೆಗಳ ನಿರ್ಮಾಣಕ್ಕೆ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ನೀಡುತ್ತಿಲ್ಲ. ಅಂಬೇಡ್ಕರ್ ಕನಸು ನನಸಾಗಲು ಪ್ರಸ್ತುತ ಯುವಸಮೂಹ ಶಿಕ್ಷಣದ ಮಹತ್ವ ಅರಿತು ವೈಚಾರಿಕತೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಉಪನಿರ್ದೇಶಕ ಶಿವಕುಮಾರ್, ಹಿರಿಯ ಸಾಹಿತಿ ಎಚ್.ಲಿಂಗಪ್ಪ, ಪ್ರೊ.ಪರಮೇಶ್ವರಪ್ಪ, ಪ್ರೊ.ಕರಿಬಸಪ್ಪ, ತುರುವನೂರು ಜಗನ್ನಾಥ್, ಹುಚ್ಚವನಳ್ಳಿ ವೆಂಕಟೇಶ್, ವಕೀಲ ಚಂದ್ರಪ್ಪ, ಜಂಬೂ ದ್ವೀಪ ಅಧ್ಯಕ್ಷ ರಾಮಣ್ಣ, ಬಿಎಸ್‌ಐನ ನೀತಿಗೆರೆ ಮಂಜಪ್ಪ, ನನ್ನಿವಾಳ ರವಿ, ಜಗಳೂರು ಡಿ.ತಿಮ್ಮಕ್ಕ, ವಾಮದೇವ, ಪ್ರಾಂಶುಪಾಲ ಕೆ.ರಂಗಪ್ಪ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಎಲ್.ಶಾಂತಕುಮಾರ್, ಬೀಮಾ ಆರ್ಮಿ ಅಧ್ಯಕ್ಷ ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net