ಸರ್ವರ ಮೇಲಿದೆ ಸಮಾಜದ ಹೊಣೆ

CTD KUCNCHIGA
Published on

ಚಿತ್ರದುರ್ಗ: ಮುಂದಿನ ಪೀಳಿಗೆಯ ಮೇಲೆ ಕುಂಚಿಗ ಸಮಾಜವನ್ನು ಮುನ್ನೆಡೆಸುವ ಜವಾಬ್ದಾರಿ ಇದೆ ಎಂದು ಮಾಜಿ ಶಾಸಕ, ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಜಿಲ್ಲಾಧ್ಯಕ್ಷ ಎಂ.ಬಿ.ತಿಪ್ಪೇರುದ್ರಪ್ಪ ಹೇಳಿದರು.
ಕುಂಚಿಗ ವೀರಶೈವ ಲಿಂಗಾಯಿತ ಸಮಾಜದ ಜಿಲ್ಲಾ ಘಟಕ ಮತ್ತು ಉತ್ಥಾನ ಟ್ರಸ್ಟ್ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಬೆಳೆಯ ಬೇಕಾದರೆ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದ್ದು, ದಾನ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ. ಇದರಿಂದ ಸಮಾಜ ಬಲಿಷ್ಠವಾಗಲಿದೆ. ಉತ್ತಮ ಸಹಕಾರ ದೊರೆತರೆ ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಈ ಸಮಾರಂಭವನ್ನು ಆಚರಿಸಬಹುದಾಗಿದೆ. ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯಬೇಕಿದೆ. ಆದ್ದರಿಂದ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸುವಂತೆ ಪಾಲಕರಿಗೆ ಸಲಹೆ ನೀಡಿದರು.
ಮಾಜಿ ಶಾಸಕ ಪಿ.ರಮೇಶ್ ಮಾತನಾಡಿ, ನಮ್ಮಲ್ಲಿರುವ ಕೀಳರಿಮೆ ತೊರೆದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ. ಸಮಾಜದವರು ಇಂಥ ಕಾರ‌್ಯಕ್ರಮಗಳಿಗೆ ಸೂಕ್ತ ದೇಣಿಗೆ ನೀಡಲು ಒತ್ತು ನೀಡಬೇಕಿದೆ. ವರ್ಷದಿಂದ ವರ್ಷಕ್ಕೆ ಇಂತಹ ಕಾರ‌್ಯಕ್ರಮಗಳಳೊಂದಿಗೆ ಪ್ರತಿಭಾ ಪುರಸ್ಕಾರದ ಪ್ರಮಾಣವೂ ಹೆಚ್ಚಾಗಬೇಕಿದೆ ಎಂದರು.
ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಸಮಾಜದ ಕಾರ‌್ಯದರ್ಶಿ ಎಚ್.ಕುಬೇರಪ್ಪ ಮಾತನಾಡಿದರು. ನಿವೃತ್ತ ಡಿವೈಎಸ್‌ಪಿ ಬಸವರಾಜ್, ಜಿ.ಆರ್.ರಾಜಪ್ಪ, ಪಿ.ಶಿವಪ್ರಕಾಶ, ಬಿ.ಟಿ.ವಿಶ್ವನಾಥ್, ಲವಕುಮಾರ್, ಓಂಕಾರಪ್ಪ, ಯೋಗೇಂದ್ರಪ್ಪ, ಹರೀಶ್, ಸಿದ್ದಪ್ಪ, ಎಂ.ತಿಪ್ಪೇರುದ್ರಪ್ಪ, ಎಲ್.ಬಿ.ರಾಜಶೇಖರಪ್ಪ, ಬಿ.ಸಿ.ಶಾಂತರಾಜ್ ಮತ್ತಿತರ ಸಮಾಜದ ಪ್ರಮುಖರು ಇದ್ದರು.
ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ.ಎಂ.ಯೋಗೇಂದ್ರ ಹಾಗೂ ಡಾ.ಅರವಿಂದ ಪಾಟೀಲ್ ಅವರನ್ನು ಗೌರವಿಸಲಾಯಿತು. ಗಂಜಿಗಟ್ಟೆ ಕೃಷ್ಣಮೂರ್ತಿ, ಮೀನಾಕ್ಷಮ್ಮ ಜಾನಪದ ಗೀತೆ ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net