

ಚಿತ್ರದುರ್ಗ: ಅರಣ್ಯ ನಾಶದಿಂದಾಗಿ ತಾಪಮಾನ ಅಧಿಕವಾಗುತ್ತಿದ್ದು, ಜೀವಸಂಕುಲಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಡಿಸಿಎಫ್ ಟಿ.ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ವಿಶ್ವಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಿ.ಶಿವಣ್ಣ ಫೌಂಡೇಷನ್ ಟ್ರಸ್ಟ್, ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ 50 ಸಾವಿರ ಸಸಿ ನೆಡುವ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೇರೆ, ಬೇರೆ ಕಾರಣಗಳಿಂದಾಗಿ ಅರಣ್ಯ ನಾಶವಾಗುತ್ತಿದೆ ಎಂದರು.
ಇದರೊಂದಿಗೆ ಗಾಳಿ, ನೀರು, ಆಹಾರವೂ ಕಲುಷಿತವಾಗುತ್ತಿದೆ. ಸಸಿಗಳನ್ನು ನೆಡುವುದು ಅರಣ್ಯ ಇಲಾಖೆ ಕೆಲಸವೆಂದು ಭಾವಿಸುವುದು ತಪ್ಪು. ಪ್ರತಿಯೊಬ್ಬರ ಮೇಲೂ ಜವಾಬ್ದಾರಿಯಿದೆ. ಜಿಲ್ಲೆಯಲ್ಲಿ 84 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಸಸಿಗಳನ್ನು ನೆಟ್ಟು ಪೋಷಿಸಿದರೆ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬಹುದು. ಇಲಾಖೆಯಿಂದ ಕಳೆದ ವರ್ಷ 7.50 ಲಕ್ಷ ಸಸಿಗಳನ್ನು ಬೆಳೆಸಲಾಗಿತ್ತು. ಈ ವರ್ಷ 17 ಲಕ್ಷ ಸಸಿಗಳನ್ನು ಜಿಲ್ಲೆಯಲ್ಲಿ ಬೆಳೆಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಆಯುಕ್ತೆ ಎಂ.ರೇಣುಕಾ ಮಾತನಾಡಿ, ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೊ ಅವುಗಳನ್ನು ಜೋಪಾನ ಮಾಡುವುದು ಕೂಡ ಅಷ್ಟೇ ಮುಖ್ಯ ಎಂದರು.
ಚಿಕ್ಕ ಮಕ್ಕಳಿಂದ ಸಸಿಗಳನ್ನು ನೆಡಸಬೇಕು. ಮುಂದೆ ಅವು ಮರವಾದಾಗ ಮಕ್ಕಳಿಗೆ ಖುಷಿ ಕೊಡುತ್ತವೆ ಎಂದ ಅವರು, ನಗರಸಭೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲು ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಇಂಜಿನಿಯರ್ ಪಿ.ಎಲ್.ಸುರೇಶ್‌ರಾಜು ಮಾತನಾಡಿ, ಬೀಜದ ಉಂಡೆಗಳನ್ನು ತಯಾರಿಸಿ ಪಸರಿಸುವ ಕೆಲಸ ನಿರಂತರ ಆಗಬೇಕು ಎಂದರು.
ವಕೀಲ ಕೆ.ಎಸ್.ವಿಜಯ್ ಮಾತನಾಡಿ, ಆದರ್ಶ ವ್ಯಕ್ತಿಯಾಗಿದ್ದ ಬಿ.ಸಿ.ಶಿವಣ್ಣ ಹೆಸರಲ್ಲಿ ಸಮಾಜಮುಖಿ ಕಾರ್ಯಗಳು ಮಾದರಿ ಆಗಿವೆ. ಜತೆಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಆದರ್ಶ, ತತ್ವಗಳು ಹಾಗೂ ಪರಿಸರದೆಡೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಹಿರಿಯೂರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷೆ ಡಾ.ಬಿ.ಎಸ್.ತ್ರಿವೇಣಿ, ಕಾರ್ಯದರ್ಶಿ ಬಿ.ಎಸ್.ನಾಗರಾಜು, ಸದಸ್ಯೆ ಬಿ.ಎಸ್.ಹೇಮಲತಾ, ತಾಪಂ ನಿವೃತ್ತ ಇಒ ಪಾಂಡ್ಯಪ್ಪ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ವಕೀಲ ಮಾಲತೇಶ್ ಅರಸ್,ಡಿಆರ್‌ಎಫ್‌ಒ ಪ್ರದೀಪ್ ಕೇಸರಿ ಮತ್ತಿತರರು ಇದ್ದರು.
*ಕೋಟ್
ಜಿಲ್ಲಾದ್ಯಂತ 50 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಚಂದ್ರವಳ್ಳಿಯಿಂದ ಈ ಕಾರ‌್ಯ ಆರಂಭವಾಗಿದೆ. ಗಿಡ-ಮರಗಳು ನಾಶವಾಗುತ್ತಿರುವುದರಿಂದ ಪರಿಸರದಲ್ಲಿ ಏರುಪೇರಾಗುತ್ತಿದೆ. ಜೀವರಾಶಿಗಳು ತತ್ತರಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಜವಾಬ್ದಾರಿ ನಾವೆಲ್ಲರೂ ಅರಿತುಕೊಳ್ಳಬೇಕಿದೆ.
ಡಾ.ಬಿ.ಎಸ್.ತ್ರಿವೇಣಿ, ಟ್ರಸ್ಟ್ ಅಧ್ಯಕ್ಷೆ