ಸರ್ವರ ಕಲ್ಯಾಣ, ಪ್ರಗತಿಯ ಬಜೆಟ್:ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್

ಸರ್ವರ ಕಲ್ಯಾಣ, ಪ್ರಗತಿಯ ಬಜೆಟ್:ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್
Published on

ಹಾಸನ: ಈ ಬಾರಿಯ ಕೇಂದ್ರ ಬಜೆಟ್ ಸರ್ವ ಕ್ಷೇತ್ರಗಳ ಕಲ್ಯಾಣಕ್ಕೂ ಒತ್ತು ನೀಡಿದೆ. ಮಹಿಳೆಯರು, ಯುವಕರು ಸೇರಿದಂತೆ ಸಾಮಾನ್ಯ ವರ್ಗಕ್ಕೆ ಅನುಕೂಲ ಕಲ್ಪಿಸಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅವರು ಹೇಳಿದರು.
ಬಜೆಟ್ ಮಂಡನೆಯಾದ ಬಳಿಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಕ್ಯಾನ್ಸರ್ ಔಷಧ ಬೆಲೆ ಕಡಿಮೆ ಮಾಡಿರುವುದು ರೋಗಿಗಳ ಅನುಕೂಲ ಆಗಲಿದೆ. ಕೃಷಿ-ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿರುವುದು ಸ್ವಾಗತಾರ್ಹ. 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ತಂದಿರುವುದು ಗಮನಾರ್ಹ. ಮುದ್ರಾ ಸಾಲವನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಳ ಮಾಡಿರುವುದು ಅನೇಕರಿಗೆ ಉಪಯೋಗ ಆಗಲಿದೆ ಎಂದರು.
ಪ್ರಮುಖವಾಗಿ ಅನ್ನದಾತ, ಬಡವ, ಮಹಿಳೆಯರು ಸೇರಿ, 9 ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಒಳ್ಳೆಯದು. ಹಾಗೆಯೇ ಕೌಶಲ, ಮಧ್ಯಮ ವರ್ಗ, ನಿರುದ್ಯೋಗ, ಎಂಎಸ್‌ಎಂಇ ಕ್ಷೇತ್ರಗಳಿಗೂ ಒತ್ತು ನೀಡಿರುವುದರಿಂದ ಇದು ಎಲ್ಲಾ ಸಮುದಾಯ, ವರ್ಗಕ್ಕೆ ಪೂರಕವಾದ ಬಜೆಟ್ ಎನ್ನಬಹುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮತ್ತೈದು ವರ್ಷ ಹೆಚ್ಚಳ ಮಾಡಿರುವುದು ಬಡವರಿಗೆ ಉಪಯೋಗ ಆಗಲಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಬರೋಬ್ಬರು 1.52 ಲಕ್ಷ ಕೋಟಿ ರೂ. ಅನುದಾನ ನೀಡಿರುವುದು ಉತ್ತೇಜನಕಾರಿಯಾಗಿದೆ. ಒಟ್ಟಾರೆ ಇದು ಸರ್ವರ ಕಲ್ಯಾಣ ಹಾಗೂ ಪ್ರಗತಿಗೆ ಪೂರಕವಾದ ಬಜೆಟ್ ಆಗಿದೆ. ಇದಕ್ಕಾಗಿ ನಮ್ಮ ಪಕ್ಷ ಹಾಗೂ ನಾಯಕರ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net