

ರಾವಂದೂರು: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಆದ್ಯತೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಹರಳಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದಾಗ ಜನರು ನನಗೆ ನೀಡಿದ ಅಧಿಕಾರವನ್ನು ಜನರ ಸೇವೆಗೆ ಬಳಸಿಕೊಂಡಿದ್ದೇನೆ.
ಯಾವುದೇ ಜಾತಿ- ಪಕ್ಷಭೇದ ಮರೆತು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಈಗ ಶ್ರೀರಕ್ಷೆಯಾಗಿವೆ ಎಂದರು.
ಜೆಡಿಎಸ್ ಪ್ರಾದೇಶಿಕ ಪಕ್ಷದ ಪ್ರಣಾಳಿಕೆಯನ್ನು ನೋಡಿ ರಾಷ್ಟ್ರೀಯ ಪಕ್ಷಗಳು ತತ್ತರಿಸಿ ಹೋಗುತ್ತಿವೆ. ಆ ಮಟ್ಟಿಗೆ ಜನಪರ ಯೋಜನೆ ರೂಪಿಸುವ ಧ್ಯೇಯ ನಮ್ಮದು. ಈ ಬಾರಿ ನಮ್ಮ ಪಕ್ಷವೇ ಎಲ್ಲೆಡೆ ಜಯಭೇರಿ ಬಾರಿಸಿ ಬಹುಮತ ಸಾಧಿಸಲಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಎಲ್.ಮಣಿ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಜವರಪ್ಪ, ಜಿ.ಪಂ. ಮಾಜಿ ಸದಸ್ಯ ಚಂದ್ರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಂದ್ರ, ನಿರ್ದೇಶಕ ವಿಜಯ್, ಗ್ರಾ.ಪಂ.ಸದಸ್ಯರಾದ ಶ್ರೀಕಂಠಾರಾಧ್ಯ, ನಂದೀಶ್, ಎಚ್.ಆರ್.ದೀಪು, ಮುಖಂಡರಾದ ಆರ್.ವಿ.ಬಸವರಾಜು, ಕೆ.ಆರ್.ಮಹದೇವ್, ಶಿವಾರಾಧ್ಯ, ಪಟೇಲ್ ಕೆಂಡಗಣ್ಣ, ತಮ್ಮಡಹಳ್ಳಿ ಸತೀಶ್, ಅಶೋಕ ಇತರರು ಹಾಜರಿದ್ದರು.