

ಚಿತ್ರದುರ್ಗ: ಸಮಾಜದ ಆಗು-ಹೋಗು, ಅಂಕು-ಡೊಂಕು, ಒರೆ-ಕೋರೆಗಳನ್ನು ಅತ್ಯಂತ ಸುಲಭ, ಸರಳ ಭಾಷೆಯಲ್ಲಿ ತ್ರಿಪದಿ ರಚಿಸಿ ಜನ ಸಾಮಾನ್ಯರಿಗೆ ತಿಳಿಸಿದ ಸರ್ವಜ್ಞ ಕವಿಯ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕವಿ ಸರ್ವಜ್ಞರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಕುಲಕೋಟಿಗೆ ಚಿರಪಚಿರಿತರಾದವರು ಕವಿ ಸರ್ವಜ್ಞ. ಸಮಾಜದ ಅಂಕುಡೊಂಕು, ಮೌಢ್ಯಗಳನ್ನು ನಿರ್ಧಾಕ್ಷಿಣ್ಯದಿಂದ ಕಟುವಾಗಿ ಟೀಕಿಸುವ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಸರ್ವಜ್ಞರ ವಚನಗಳು ನೇರ ಹಾಗೂ ಸರಳವಾಗಿದ್ದು ಸುಲಭ ವಾಗಿ ಅರ್ಥವಾಗುತ್ತವೆ ಎಂದರು.
ಚಿಕ್ಕಬೆನ್ನೂರು ಶಿಕ್ಷಕಿ ಗೀತಾಭರಮಸಾಗರ ಮಾತನಾಡಿ, ಕರ್ನಾಟಕದ ಭಾಷಾ ಪರಂಪರೆಯಲ್ಲಿ ಸರ್ವಜ್ಞನ ತ್ರಿಪದಿಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಕನ್ನಡ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ಅನನ್ಯವಾಗಿದೆ. ಸಾಮಾಜಿಕ ಬದುಕು, ಸ್ವ ಅನುಭವ, ಅರಿವು ಕಟ್ಟಿಕೊಡುವ ತ್ರಿಪದಿಗಳು ಬದುಕಿಗೆ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಸರ್ವಜ್ಞರು ಸಮಾಜ ತಿದ್ದುವ ಕೆಲಸ ಮಾಡಿದರು. ಸಮಾಜದಲ್ಲಿ ಧಾರ್ಮಿಕ ನೀತಿ, ನಿಯಮಗಳು ಶಿಥಿಲಾವಸ್ಥೆಯಲ್ಲಿದ್ದ ಸಮಯದಲ್ಲಿ ಕ್ರಾಂತಿಪುರುಷರಾಗಿ ಸರ್ವಜ್ಞರು ಹೊರಹೊಮ್ಮಿದರು, ಮೇಲ್ವರ್ಗದವರಿಂದ ತಳಸಮುದಾಯದವರ ಮೇಲೆ ಆಗುವ ಶೋಷಣೆ, ಸಮಾಜದಲ್ಲಿರುವ ಅಸಮಾನತೆ, ಮೌಢ್ಯ ಹೋಗಲಾಡಿಸಿ, ಸಮ ಸಮಾಜದ ಕಲ್ಪನೆ ಕಟ್ಟಿ ಕೊಟ್ಟವರು ಕವಿ ಸರ್ವಜ್ಞ ಎಂದು ಹೇಳಿದರು.
ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್. ಬೈಲಮ್ಮ ಮಾತನಾಡಿ, ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಿ 200 ಕೋಟಿ ರೂ.ಅನು ದಾನ ನೀಡಬೇಕು. ಪ್ರತಿ ಹಳ್ಳಿಯಲ್ಲಿ ಕುಂಬಾರಿಕೆ ಪ್ರೋತ್ಸಾಹಿಸಲು ಮಣ್ಣು ಪರಿಷ್ಕರಣಾ ಘಟಕ, ಪ್ರತಿ ತಾಲೂಕಿನಲ್ಲಿ ಮಣ್ಣಿನ ಮಡಕೆಗೆ ಮಾರುಕಟ್ಟೆ ವ್ಯವಸ್ಥೆ,ಪ್ರತಿ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗೆ ಮಣ್ಣಿನ ಮಡಕೆ ಬಳಕೆಗೆ ಆದೇಶಿಸುವುದು ಸೇರಿ ಕುಂಬಾರ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಡಿಸಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ಯರ‌್ರಿಸ್ವಾಮಿ, ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ನಿರ್ದೇಶಕ ಕೆ.ಟಿ. ರಮೇಶ್, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಕಾರ್ಯದರ್ಶಿ ಹೇಮಾವತಿ, ಜಿಲ್ಲಾ ಕುಂಬಾರ ಸಮಾಜದ ಉಪಾಧ್ಯಕ್ಷ ಸುನಿಲ್ ಮತ್ತಿತರರು ಇದ್ದರು. ಜಗದೀಶ್ ತಂಡದವರು ಗೀತಗಾಯನ ನಡೆಸಿಕೊಟ್ಟರು.