

ಹಾಸನ: ಸರ‌್ಫೇಸಿ ಕಾಯ್ದೆಯಡಿ ರೈತರ ಜಮೀನಿನನ್ನು ಸ್ವಾಧೀನ ಮಾಡುವ ಮೂಲಕ ಕೃಷಿಗೆ ಮರಣ ಶಾಸನ ಬರೆಯಲು ಹೊರಟಿರುವುದನ್ನು ಖಂಡಸಿ ಚಳವಳಿ ರೂಪಿಸುವುದು ಅನಿವಾರ್ಯ ಆಗಿದೆ ಎಂದು ರೈತಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ಈ ಕಾಯ್ದೆಯ ಮೂಲಕ ರೈತ ಭೂಮಿಯನ್ನು ಸ್ವಾಧೀನ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಆನ್‌ಲೈನ್ ಮೂಲಕ ಹರಾಜು ಹಾಕಿರುವ ಭೂಮಿಯನ್ನು ಬಿಡದಂತೆ ಚಳವಳಿ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಕೃಷಿಯಲ್ಲಿ ಕೃಷಿಕ ಇರಬಾರದು ಎಂದು ಹುನ್ನಾರ ಮಾಡಲಾಗುತ್ತಿದೆ. ಭೂಮಿ, ಬೀಜ, ರಸಗೊಬ್ಬರ ಕಿತ್ತುಕೊಳ್ಳಲು ಸರ‌್ಫೇಸಿ ಕಾಯ್ದೆ ತರಲಾಗಿದೆ. ಇದೂ ಸೇರಿದಂತೆ ಹಲವು ಕಾರಣಗಳಿಂದ ಕೃಷಿ ಮಾಡುವವರ ಸಂಖ್ಯೆ ಇಂದು ಗಣನೀಯವಾಗಿ ಕುಸಿಯುತ್ತಿದೆ. ಈ ಮೊದಲು ಕಾಫಿ, ಏಲಕ್ಕಿ, ಮೆಣಸು ಈ ಕಾಯ್ದೆ ಅಡಿ ಬರಬಾರದು ಎಂದು ಹೇಳಲಾಗಿತ್ತು. ಇದೀಗ ಕಾಫಿ ಕೂಡ ಈ ಆಕ್ಟ್‌ನಡಿ ಬರಲಿದೆ ಎಂದು ಹೈಕೋರ್ಟ್ ಹೇಳಿದೆ. ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ ಎಂದರು.
ಹಿರಿಯ ಮುಖಂಡ ಗಂಗಾಧರ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವವರೆಗೂ ಕೃಷಿ ಭೂಮಿಯನ್ನು ನೇರವಾಗಿ ಪರಭಾರೆ ಮಾಡುವ ಪದ್ಧತಿ ನಿಲ್ಲಬೇಕು. ಅಲ್ಲೀವರೆಗೂ ಹೋರಾಟ ಮುಂದುವರಿಸುವಾಗಿ ತಿಳಿಸಿದರು.
2002 ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ಜಾರಿಗೆ ಬಂದ ಕಾಯ್ದೆ ಅನುಷ್ಠಾನ ಆಗದಂತೆ ನೋಡಿಕೊಂಡಿದ್ದೆವು. ಆದರೀಗ ಹಾಸನ ಜಿಲ್ಲೆಯಲ್ಲೇ ರೈತರ ಸಾಲಕ್ಕಾಗಿ ಅವರ ಮನೆಯನ್ನೇ ಇ.ಟೆಂಡರ್ ಮೂಲಕ ಹರಾಜು ಮಾಡುವುದೂ ಕಾನೂನು ಬಾಹಿರ ಎಂದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೃಷಿ ವಲಯದಿಂದ ಈ ಕಾಯ್ದೆ ಹೊರಗಿಟ್ಟಿದ್ದರು. 2019 ರಲ್ಲಿ ಮೋದಿ ಅವರು ಪ್ರಧಾನಿ ಆದ ನಂತರ ಮರು ಜಾರಿ ಮಾಡಿದರು.ಜಿಲ್ಲೆಯೊಂದರಲ್ಲೇ ಕೆನರಾ ಲೀಡ್ ಬ್ಯಾಂಕ್, ಬೇಲೂರು, ಆಲೂರು ಸಕಲೇಶಪುರ ವ್ಯಾಪ್ತಿಯಲ್ಲಿ ಇ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ಮಾಡಿ ಹಸ್ತಾಂತರ ಆಗಿದೆ ಎಂದು ಹೇಳಿದರು.
ರೈತರಿಗೆ ತೊಂದರೆ ಆಗುತ್ತಿರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಇಬ್ಬರೂ ಕಾರಣ, ಇಬ್ಬರೂ ಕಾರ್ಪೋರೇಟ್ ಸಂಸ್ಥೆಗೆ ಜೈ ಎನ್ನುತ್ತಿದ್ದಾರೆ.ಕೂಡಲೇ ಸಾಲ ವಸೂಲಾತಿ ನಿಲ್ಲಿಸಬೇಕು.ಹಾಗೆಯೇ ಸರ‌್ಫೇಸ್ ಕಾಯ್ದೆ ಸಹ ನಿಲ್ಲಿಸಬೇಕು, ಹಾಗೆಯೇ ವ್ಯವಸಾಯವನ್ನು ಈ ಕಾಯ್ದೆಯಿಂದ ಹೊರಗಿಡಬೇಕು.ಇದರ ಬಗ್ಗೆ ರಾಜ್ಯ, ಕೆಂದ್ರ ನೆರವಿಗೆ ಬಾರದಿದ್ದರೆ ಕಾನೂನು ಭಂಗ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅರೇಗಳ್ಳಿ ಮಂಜು, ಕಿರಣ್, ಬಳ್ಳೂರು ಸ್ವಾಮಿಗೌಡ ಇತರರು ಇದ್ದರು.