

ಚಿಕ್ಕಮಗಳೂರು: ಸರ್ಫೆಸಿ ಕಾಯಿದೆ ಜಾರಿಗೆ ತಂದಿದ್ದು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ. ಕಳೆದ ೧೦ ವರ್ಷಗಳಿಂದ ಆಡಳಿತ ಪಕ್ಷದವರೇ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರೂ ಸರ್ಫೇಸಿ ಕಾಯಿದೆ ಜಾರಿಗೆ ತಡೆಯೊಡ್ಡುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆ ಮತ್ತು ಅಭಿವೃದ್ಧಿ ಸಾಲ ಪಡೆದ ಕಾಫಿ ಬೆಳೆಗಾರರು ಸಾಲ ತೀರಿಸಲಾಗದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಬ್ಲಾಕ್ ಮನಿ ಇರುವವರು ರಿಯಲ್ ಎಸ್ಟೇಟ್ ಏಜೆನ್ಸಿಗಳು, ಬ್ಯಾಂಕ್ ಅಧಿಕಾರಿಗಳು ಕಮಿಷನ್ ಆಸೆಗಾಗಿ ಸರ್ಫೆಸಿ ಕಾಯಿದೆಯ ಹೆಸರಿನಲ್ಲಿ ಕಾಫಿ ತೋಟಗಳನ್ನು ಕನಿಷ್ಠ ಬೆಲೆಗೆ ಹರಾಜು ಹಾಕುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಬದುಕಲು ಆಸರೆಯಾಗಿದ್ದ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ ಎಂದರು.
ಕಾಫಿ ಬೆಳೆಗಾರ ದಂಪತಿಗಳು ತಮ್ಮ ಕಾಫಿ ತೋಟದ ದಾಖಲೆ ನೀಡಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಈ ಸಾಲದ ಬಾಬ್ತನ್ನು ಪಾವತಿ ಮಾಡಿದರೂ ಬ್ಯಾಂಕ್ ಅಧಿಕಾರಿಗಳು ಸರ್ಫೆಸಿ ಕಾಯಿದೆ ಬಳಸಿಕೊಂಡು ಜಮೀನಿನ ಮಾರುಕಟ್ಟೆ ಬೆಲೆ ನಾಲ್ಕು ಪಟ್ಟು ಇದ್ದರೂ ಮೂರು ಕಾಸಿನ ಬೆಲೆಗೆ ಹರಾಜು ಮಾಡಿದ್ದಾರೆ. ಜಮೀನು ಕಳೆದುಕೊಂಡಿರುವ ದಂಪತಿಗಳು ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದರು.
ಈಗಾಗಲೇ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸುಸ್ತಿಯಾಗಿರುವ ಸುಮರು ಮೂರು ಸಾವಿರ ಕಾಫಿ ಬೆಳೆಗಾರರ ಜಮೀನು ಹರಾಜಿಗೆ ನೋಟೀಸ್ ನೀಡಿ ಆನ್‌ಲೈನ್ ಹರಾಜಿಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಮೊದಲಿಗೆ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಭೂಮಿ ಕಳೆದುಕೊಳ್ಳುತ್ತಾರೆ. ನಂತರದ ಸರದಿ ದೊಡ್ಡ ಬೆಳೆಗಾರರದ್ದಾಗಿದ್ದು. ಭೂಮಿ ಕಳೆದುಕೊಳ್ಳುವ ಮೊದಲೆ ಎಚ್ಚೆತ್ತು ಒಗ್ಗಟ್ಟಾಗಿ ಸರ್ಫೇಸಿ ಕಾಯಿದೆ ರದ್ದುಪಡಿಸಲು ಹೋರಾಟ ಮಾಡಲು ಮುಂದಾಗುವAತೆ ಮನವಿ ಮಾಡಿದರು.
ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ಬೆಳೆಗಾರರ ರಕ್ಷಣೆಗೆ ಮುಂದಾಗಿದ್ದು ಬಿಟ್ಟರೆ ಇದುವರೆಗೆ ಬೆಳೆಗಾರರಿಗೆ ಯಾವುದೇ ಪ್ಯಾಕೇಜ್‌ಗಳು ಘೋಷಣೆಯಾಗಿಲ್ಲ. ಆದರೆ ಕಾಫಿ ಬೆಳೆಗಾರರು ಪ್ಯಾಕೇಜ್ ಬಳಸಿಕೊಳ್ಳುತ್ತಿಲ್ಲ ಎಂದು ಕೆಜಿಎಫ್ ಅಧ್ಯಕ್ಷರು ಬೆಳೆಗಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಕೇರಳ ಮತ್ತು ತಮಿಳುನಾಡುಗಳಲ್ಲಿಯೂ ಪ್ಲಾಂಟೇಷನ್ ಬೆಳೆಗಾರರಿದ್ದು, ಅಲ್ಲಿಗೆ ಜಾರಿಯಾಗದ ಸರ್ಫೇಸಿ ಕಾಯಿದೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಗೆ ಏಕೆ ಜಾರಿಯಾಗುತ್ತಿದೆ. ಈ ಕಾರಣದಿಂದ ಸರ್ಫೇಸಿ ಕಾಯಿದೆಯಿಂದ ಪ್ಲಾಂಟೇಷನ್ ಬೆಳೆಗಾರರ ಮೇಲಾಗುತ್ತಿರುವ ತೊಂದರೆ ತಪ್ಪಿಸಲು ಪ್ಲಾಂಟೇಷನ್ ವ್ಯಾಪ್ತಿಯ ಸಂಸದರು ಕಾಯಿದೆ ವಜಾಗೊಳಿಸಲು ಒತ್ತಾಯಿಸಬೇಕು ಎಂದರು.
ರಾಜ್ಯದ ಎಲ್ಲ ಸಂಸದರು ಈ ಕರಾಳ ಸರ್ಫೇಸಿ ಕಾಯಿದೆ ವಿರುದ್ಧ ಧ್ವನಿ ಎತ್ತಬೇಕು. ಕಾಫಿ ಬೆಳೆಗಾರರು ಒಗ್ಗಟ್ಟಾಗಿ ಕಾಯಿದೆ ರದ್ದಾಗುವವರೆಗೆ ಹೋರಾಟ ಮಾಡಲು ಮುಂದಾಗುವAತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಜೆಡಿಎಸ್ ಮುಖಂಡ ಎಚ್.ಎಸ್.ಮಂಜಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ರೈತ ಮುಖಂಡ ಗುರುಶಾಂತಪ್ಪ ಇದ್ದರು.