ಸರ್ದಾರ್ ವಲ್ಲಭಭಾಯಿ ಪಟೇಲ್‌ರನ್ನು ಸ್ಮರಿಸಿದ ಮೈಸೂರು

sardar vallabhbhai patel jayanti
Published on

ಮೈಸೂರು: ನಮ್ಮ ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರೃ ಸೇನಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆಶಯದಂತೆ ರಾಷ್ಟ್ರೀಯ ಏಕತೆ, ಐಕ್ಯತೆ, ಭಾವೈಕ್ಯತೆ, ಸಮಗ್ರತೆ, ಸೌಹಾರ್ದತೆ ಪ್ರತಿಯೊಬ್ಬ ಭಾರತೀಯರ ಎದೆಯಾಳದ ಉಸಿರಾಗಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ವತಿಯಿಂದ ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯ ಅಕ್ಕನ ಬಳಗ ಶಾಲೆಯಲ್ಲಿ ಮಂಗಳವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿನ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಏಕತೆಯನ್ನು ತಮ್ಮ ಬದುಕಿನ ಧ್ಯೇಯ ವಾಕ್ಯ ಮಾಡಿಕೊಂಡಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ವಾತಂತ್ರೃ ಬಂದ ಸಂದರ್ಭ ದೇಶದಲ್ಲಿದ್ದ ವಿವಿಧ ಸಂಸ್ಥಾನಗಳನ್ನು ಭಾರತದಲ್ಲಿ ಉಳಿಯುವಂತೆ ಮಾಡಿ ದೇಶವನ್ನು ಸುಭದ್ರವಾಗಿ ಕಟ್ಟಿದರು ಎಂದು ಹೇಳಿದರು.

ಪ್ರತಿವರ್ಷ ಅ.31 ಅನ್ನು ರಾಷ್ಟ್ರೀಯ ಏಕತಾ ದಿವವಾಗಿ ದೇಶದಲ್ಲಿ ಆಚರಿಸಲಾಗುತ್ತದೆ. ಅಖಂಡ ಭಾರತದ ಒಗ್ಗೂಡಿವಿಕೆಗೆ ಕಾರಣೀಭೂತರಾದ ಭಾರತದ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ಶತಾಬ್ದಿಯ ನೆನಪಿಗಾಗಿ ಈ ಆಚರಣೆಯನ್ನು 2014 ರಿಂದ ಭಾರತ ಸರ್ಕಾರ ಆರಂಭಿಸಿದೆ ಎಂದರು.

ಬ್ರಿಟಿಷರನ್ನು ಭಾರತದಿಂದ ತೊಲಗಿಸುವಲ್ಲಿ ಬಹು ಮುಖ್ಯ ಪಾತ್ರವಹಿಸಿದ ನಾಯಕರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಹೆಸರೇ ಸರ್ದಾರ್ ವಲ್ಲಭಭಾಯಿ ಪಟೇಲ್. 1928ರ ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಟೇಲರು ತೋರಿದ ಅಸಾಧಾರಣ ಧೈರ್ಯ ಮತ್ತು ಚಾಕಚಕ್ಯತೆಗೆ ಮಾರುಹೋದ ಅಲ್ಲಿನ ಮಹಿಳೆಯರು ಅವರಿಗೆ ಸರ್ದಾರ್‌ಎಂಬ ಬಿರುದನ್ನು ನೀಡಿದ್ದರು ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಕಾವೇರಿಯಮ್ಮ ವಚನ ಗಾಯನ ನಡೆಸಿಕೊಟ್ಟರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಮುಖ್ಯಶಿಕ್ಷಕಿ ಸುಗುಣಾವತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಮುರುಳಿಧರ್, ಮುಕ್ತಕ ಕವಿ ಎಂ.ಮುತ್ತುಸ್ವಾಮಿ, ಮಲ್ಲೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net