

ಚಿತ್ರದುರ್ಗ: ಗ್ಯಾರಂಟಿ ಯೋಜನೆಗಳು ಅರ್ಹರಿಗೆ ದೊರೆಯುತ್ತಿವೆ. ಇಂತಹ ಸಂದರ್ಭ ಗ್ಯಾರಂಟಿಗಳು ಅರೆಬೆಂದ ಯೋಜನೆಗಳೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆ ಸರಿಯಲ್ಲ. ನಮಗೆ ಯಾವ ರಾಜಕೀಯ ನಾಯಕರ ಸರ್ಟಿಫಿಕೆಟ್ ಬೇಕಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕಾಂಗ್ರೆಸ್ ಸರ್ಕಾರ ಶೇ.40 ಭ್ರಷ್ಟಾಚಾರವನ್ನು ಅನುಷ್ಠಾನಗೊಳಿಸುತ್ತಿದೆ ಎಂಬ ವಿಜಯೇಂದ್ರ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಸ್ಪೀಕರ್ ಹುದ್ದೆ ನೇಮಕ ಕುರಿತಾದ ಸಚಿವ ಜಮೀರ್ ಅಹಮದ್ ಅವರ ಹೇಳಿಕೆಯನ್ನು ಪೂರ್ಣ ಅರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸಕಾರಾತ್ಮಕ ಟೀಕೆಗಳನ್ನು ಮಾಡಲಿ ಎಂದ ಅವರು, ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧದ ಆರೋಪದ ಕುರಿತು ಉತ್ತರಿಸಲು ನಿರಾಕರಿಸಿದರು. ಮುರುಘಾ ಶ್ರೀ ಪ್ರಕರಣದಲ್ಲಿ ಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಲಿದೆ ಎಂದರು.