

ಚಿತ್ರದುರ್ಗ: ಲಿಂಗಾಯತ ಶಿವಸಿಂಪಿ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ಸಿಗುವ ಅಗತ್ಯ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.
ಕುಲಗುರು ಶ್ರೀ ಶಿವದಾಸಿಮಯ್ಯ ಅವರ ಜಯಂತಿ ಅಂಗವಾಗಿ ಜಿಲ್ಲಾ ಲಿಂಗಾಯತ ಶಿವಸಿಂಪಿ ಸಮಾಜ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಸಿಂಪಿ ಕಾಯಕ ಸಮಾಜವಾಗಿದೆ. ತಮಗೆ ನೀಡಿದ ಜವಾಬ್ದಾರಿ ಪೂರೈಸುವಲ್ಲಿ ನಿಷ್ಠೆ ತೋರುತ್ತಾರೆ. ಹೀಗಾಗಿ ಕಾಯಕದಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ಎಲ್ಲ ಸಮುದಾಯಗಳೊಂದಿಗೆ ಬೆರೆಯುವ ಹೃದಯವಂತಿಕೆ ಹೊಂದಿದ್ದಾರೆ. ದಾಸೋಹ ಸಂಸ್ಕೃತಿ ಉಳ್ಳವರೂ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಶಾಲೆಯೊಂದರ ಅಭಿವೃದ್ಧಿ ಕುರಿತು ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಏನೇ ಬೇಡಿಕೆ ಇದ್ದರೂ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಪುರಸ್ಕರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಕನ್ನಡ ನಮ್ಮ ಮಾತೃ ಭಾಷೆಯಾಗಿದ್ದು, ಮಕ್ಕಳಿಗೆ ಕಲಿಸಬೇಕು. ಪಾಲಕರು ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಮರೆತರೆ ನಾಡಿಗೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದರು.
ಯುವಸಮೂಹ ಹೆಚ್ಚಾಗಿ ಮೊಬೈಲ್ ಬಳಸುತ್ತಿರುವ ಕಾರಣ ಭವಿಷ್ಯ ಹಾಳಾಗುತ್ತಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನಭಂಡಾರ ಹೆಚ್ಚಿಸಿಕೊಂಡರೆ ಉನ್ನತಮಟ್ಟ ತಲುಪಬಹುದು. ವಚನ ಸಾಹಿತ್ಯದ ಕುರಿತು ಒಲವು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ಲಿಂಗಾಯತ ಶಿವಸಿಂಪಿ ಸಮಾಜದ ಉಪಾಧ್ಯಕ್ಷ ಡಾ.ಪ್ರಭಾಕರ್ ಶಿವಸಿಂಪಿ, ವಿವಿಧ ವಿಭಾಗದ ಅಧ್ಯಕ್ಷರಾದ ಗುರುಬಸಪ್ಪ ಬೂಸ್ನೂರ್, ಸುಭಾಷ್ ಕುಬಸದ್, ಅನಿತಾ, ಸ್ಮಿತಾ, ಜಯದೇವಮೂರ್ತಿ, ಪದಾಧಿಕಾರಿಗಳಾದ ಶೈಲಜಾ, ಇ.ಕೆ.ಮಲ್ಲಿಕಾರ್ಜುನ್, ಎಸ್.ವಿ.ಕೊಟ್ರೇಶ್, ನಿರ್ಮಲಾ, ಗೀತಾ, ಕೆಇಬಿ ಷಣ್ಮುಖಪ್ಪ ಇತರರಿದ್ದರು.