

ವಿರಾಜಪೇಟೆ: ಕಟ್ಟಡ ಮತ್ತು ಇತರ ನಿರ್ಮಾಣದ ಕಾರ್ಮಿಕರು, ಅದರಲ್ಲಿಯೂ ಮಹಿಳಾ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ವಿರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ.ಮಾದಪ್ಪ ಹೇಳಿದರು.
ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ವಿರಾಜಪೇಟೆ ನಗರದಲ್ಲಿರುವ ಬೋರೇಗೌಡ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಮಹಿಳಾ ಕಾರ್ಮಿಕರಿಗೆ ಪೌಷ್ಟಿಕಾಂಶ ಕಿಟ್ ವಿತರಸಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರು ತಮ್ಮ ಸದಸ್ಯತ್ವವನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆದು ಕೊಳ್ಳಲು ಮುಂದಾಗಬೇಕು. ಸರಕಾರ 60 ವರ್ಷ ಪೂರೈಸಿದ ಫಲನುಭವಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಕೆಎಸ್‌ಆರ್‌ಟಿಸಿ ಬಸ್‌ಪಾಸ್ ಸೌಲಭ್ಯ ಗಳನ್ನು ನೀಡಲಾಗುವುದು ಎಂದರು.
ಪೌಷ್ಟಿಕಾಂಶ ಕಿಟ್ ವಿತರಣೆ ಸಂದರ್ಭ ಕಾರ್ಮಿಕ ಕಚೇರಿಯ ಸಹಾಯಕ ಅಧಿಕಾರಿ ಎಸ್.ನವಿನ್, ಕಟ್ಟಡ ಕಾರ್ಮಿಕ ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಜಿ.ವರ್ಗಿಸ್ ಮತ್ತು ಇತರ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ 530 ಮಹಿಳಾ ಕಾರ್ಮಿಕರಿಗೆ ಪೌಷ್ಟಿಕಾಂಶ ಕಿಟ್ ವಿತರಿಸಲಾಯಿತು.