ಸರ್ಕಾರಿ ಸೌಲಭ್ಯ ಪಡೆದು ಸಬಲರಾಗಿ

16 KML 01
ಮಹಾಗಾಂವ್ ಹೈನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ವಿವಿಧ ಶಾಲೆಗಳ ಮಕ್ಕಳು ಉದ್ಘಾಟಿಸಿದರು. ಡಿಸಿ ಯಶವಂತ ಗುರುಕರ್, ಎಸಿ ಮೋನಾ ರೋತ್, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ತಹಸೀಲ್ದಾರ್ ಸುರೇಶ ವರ್ಮಾ, ಅಧಿಕಾರಿಗಳಾದ ಶಿವಪ್ರಕಾಶ, ನಾಗೇಂದ್ರಪ್ಪ ಬೆಣ್ಣೂರ, ಡಾ.ಮಂಜುನಾಥ ಇತರರಿದ್ದರು.
Published on

ಕಮಲಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲಾಧಿಕಾರಿ ಯಶವಂತ ಗುರುಕರ್ ಕರೆ ನೀಡಿದರು.

ಮಹಾಗಾಂವ್ ಕ್ರಾಸ್ನಲ್ಲಿರುವ ಹೈನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಆಡಳಿತದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಜನರ ಬಳಿಗೆ ಆಡಳಿತ ಹೋಗಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಆಯೋಜಿಸಲಾಗಿದೆ. ಇಲ್ಲಿ ಸ್ವೀಕೃತವಾದ ಅರ್ಜಿಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶರಣಸಪ್ಪ ಬೆಣ್ಣೂರ, ಆರೋಗ್ಯ ಇಲಖೆಯ ಡಾ.ಪೂಜಾ, ಭೂ ಮಾಪನಾ ಇಲಾಖೆಯ ಡಿಡಿಎಲ್ಆರ್ ಶಂಕರ, ಪಶು ಇಲಾಖೆಯ ಎಸ್.ಸಿ.ಅವಂಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ಮಾತನಾಡಿದರು.

ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಕೃಷಿ ಸಲಕರಣೆ, ಡಿಸಿಸಿ ಬ್ಯಾಂಕ್ನಿಂದ ಒಂಬತ್ತು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 2 ಲಕ್ಷ ರೂ.ನಂತೆ ಒಟ್ಟು 18 ಲಕ್ಷ ರೂ. ಬಡ್ಡಿ ರಹಿತ ಸಾಲ, ಕಾರ್ಮಿಕ ಇಲಾಖೆಯಿಂದ ವಿವಾಹವಾದ ಕಾರ್ಮಿಕರ ಮಕ್ಕಳಿಗೆ ವಿವಾಹ ವೆಚ್ಚ 50 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ಕಲಬುರಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಷ್ಟ್ರ ಮಟ್ಟದ ಇನ್ಸ್​ಫೈರ್ ಅವಾರ್ಡ್​ಗೆ ಆಯ್ಕೆಯಾದ ಬುಸಣಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ತನುಜಾ ಮತ್ತು ಪೂಜಾ ಅವರನ್ನು ಸತ್ಕರಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಗ್ರಾಪಂ ಅಧ್ಯಕ್ಷೆ ಮನೀಷಾ ಹರಸೂರಕರ್, ಎಸಿ ಮೋನಾ ರೋತ್, ಬೀದರ್ ಪಶು ವಿವಿ ಕುಲಸಚಿವ ಶಿವಪ್ರಕಾಶ, ಹೈನು ಮಹಾವಿದ್ಯಾಲಯದ ಡೀನ್ ಡಾ.ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಗ್ರೇಡ್-2 ತಹಸೀಲ್ದಾರ್ ಗಂಗಾಧರ ಪಾಟೀಲ್, ಟಿಎಚ್ಒ ಮಾರುತಿ ಕಾಂಬ್ಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಪ್ರಮುಖರಾದ ಗಿರೀಶ ಪಾಟೀಲ್, ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ್, ಡಾ.ವಾಣಿ ಪಾಗಾ, ದೀಪಕ್ ಶೆಟ್ಟಿ, ನಿಸಾರ್ ಅಹ್ಮದ್, ರಘುನಂದನ ದ್ಯಾಮಣಿ, ಮಂಜುನಾಥ ಬಿರಾದಾರ, ಸವಿತಾ, ಪ್ರಭಾವತಿ, ಪದ್ಮಾವತಿ ಇತರರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 396 ಅರ್ಜಿ ಬಂದಿದ್ದು, 224 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಇನ್ನುಳಿದ 152 ಅರ್ಜಿಗಳನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚಿಸಿ ವಿಲೇವಾರಿ ಮಾಡಲಾಗುವುದು.
| ಸುರೇಶ ವರ್ಮಾ, ತಹಸೀಲ್ದಾರ್

ಭಾಷಣ ಮತ್ತು ಸನ್ಮಾನಗಳನ್ನು ಕಡಿಮೆ ಮಾಡಿ, ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮ ಒನ್ ಸೆಂಟರ್ ಅಡಿಯಲ್ಲಿ ಸುಮಾರು 700 ಸೇವೆಗಳನ್ನು ಪಡೆಯಬಹುದು. ಆಯುಷ್ಮಾನ್ ಭಾರತ- ಆರೋಗ್ಯ ಕನರ್ಾಟಕ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ತಾಲೂಕಿನಲ್ಲಿ ಆರೋಗ್ಯ ಕಿಟ್ ಪಡೆಯಲು 2 ಲಕ್ಷ ಜನ ಅರ್ಹರಿದ್ದಾರೆ. ಆದರೆ ಕೇವಲ 23 ಸಾವಿರ ಜನರು ನೋಂದಣಿ ಮಾಡಿಸಿದ್ದಾರೆ.
| ಯಶವಂತ ಗುರುಕರ್, ಜಿಲ್ಲಾಧಿಕಾರಿ

ಡಿಸಿ ಸಾಹೇಬ್ರಿಗೆ ಅದ್ದೂರಿ ಸ್ವಾಗತ
ಮಹಾಗಾಂವ್ ಕ್ರಾಸ್ನಿಂದ ಕಾರ್ಯಕ್ರಮದ ವೇದಿಕೆವರೆಗೂ ಡಿಸಿ ಯಶವಂತ ಗುರುಕರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಲಂಕೃತ ಎತ್ತಿನ ಬಂಡಿಯಲ್ಲಿ ಡಿಸಿ ಗುರುಕರ್, ತಹಸೀಲ್ದಾರ್ ಸುರೇಶ ವರ್ಮಾ ಅವರನ್ನು ಕೂರಿಸಿ ಪ್ರಮುಖ ಬೀದಿಗಳ ಮೂಲಕ ಹೈನು ಕಾಲೇಜಿಗೆ ಕರೆತರಲಾಯಿತು. ದಾರಿಯುದ್ದಕ್ಕೂ ವಿದ್ಯಾರ್ಥಿಗಳಿಂದ ಲೇಜಿಮ್ ಸೇರಿ ಇನ್ನಿತರ ಸಂಸ್ಕೃತಿಕ ಕಾರ್ಯಕ್ರಮ ನಡೆದವು. ಡೊಳ್ಳು ಕುಣಿತ ಗಮನಸೆಳೆಯಿತು.

ಬೆಳಗ್ಗೆ ಬಂದು ಮಧ್ಯಾಹ್ನ ಹೋದ್ರು

ಗ್ರಾಮದಲ್ಲಿದ್ದು ಜನರ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂಬುದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಆದರೆ ಶನಿವಾರ ಮಹಾಗಾಂವ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮೆರವಣಿಗೆ, ಸನ್ಮಾನ ಹಾಗೂ ಭಾಷಣಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ದೂರಿದರು. ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ದೂರದ ಊರುಗಳಿಂದ ಸಾಕಷ್ಟು ಜನರು ಬಂದಿದ್ದರು. ಆದರೆ ಸಂಜೆವರೆಗೂ ಗ್ರಾಮದಲ್ಲಿದ್ದು, ಜನರ ಸಮಸ್ಯೆ ಆಲಿಸಬೇಕಿದ್ದ ಡಿಸಿ ಅವರು ಮಧ್ಯಾಹ್ನ 1ಗಂಟೆಗೆ ಕಾರ್ಯಕ್ರಮದಿಂದ ನಿರ್ಗಮಿಸಿರುವುದು ಜನರಲ್ಲಿ ಕೋಪ ತರಿಸಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net