

ಸುಂಟಿಕೊಪ್ಪ: ನಮ್ಮ ಕಾಲದಲ್ಲಿ ಶಿಕ್ಷಣಕ್ಕೆ ಪಾಲಕರೇ ಒತ್ತು ನೀಡಬೇಕಾಗಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಂದು ಮಗು ಶಿಕ್ಷಣವನ್ನು ಪಡೆಯಬೇಕೆಂಬ ನಿಯಮದಡಿಯಲ್ಲಿ ಸರ್ಕಾರ ಪಠ್ಯ ಪುಸ್ತಕ ಹಾಗೂ ದಾನಿಗಳು ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಆಶಾದಾಯಕ. ಮಕ್ಕಳು ಇಂತಹ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಶಿಕ್ಷಣದತ್ತ ಚಿತ್ತಹರಿಸುವಂತೆ ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್‌ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗದ್ದೆಹಳ್ಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ಜಿ.ಪಂ. ಮಾಜಿ ಸದಸ್ಯ ಹಾಗೂ ದಾನಿ ಪಿ.ಎಂ.ಲತೀಫ್ ಅವರು ನೀಡಿರುವ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳದಂತೆ ಸರ್ಕಾರ ಹಾಗೂ ದಾನಿಗಳು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಉತ್ತಮ ಬೆಳವಣಿಗೆ ಮಕ್ಕಳು ಶಿಕ್ಷಣ ಪಡೆದು ಸಮಾಜದ ಉತ್ತಮ ಪ್ರಜೆಗಳಾಗಿ ಮೂಡಿಬರುವ ಮೂಲಕ ಪಾಲಕರು ಮತ್ತು ತಾವು ಕಲಿತ ಶಾಲೆಯನ್ನು ಉತ್ತುಂಗ ಶಿಖರಕ್ಕೆ ಏರಿಸುವಂತಾಗಬೇಕು ಎಂದರು.
ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಸರ್ಕಾರ ಸೇರಿದಂತೆ ಹಲವು ದಾನಿಗಳು ಶಿಕ್ಷಣಕ್ಕೆ ಸಹಾಯಹಸ್ತ ನೀಡುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಸತ್ಪಜೆಗಳಾಗಿ ಮೂಡಿಬರಬೇಕು. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಸಂಸ್ಥೆ ಬೇಕಾಗಿರುವ ಮೂಲ ಸವಲತ್ತುಗಳನ್ನು ಒದಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಅಧ್ಯಕ್ಷ ಎಂ.ಎಸ್.ಸುನಿಲ್ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಆರ್.ಎಚ್.ಶರೀಫ್, ಸಿ.ಮಹೇಂದ್ರ, ಬಿ.ಕೆ.ಮೋಹನ್, ವಾಸು,ಎಸ್.ಪಿ.ಸಂದೀಫ್, ರಜಾಕ್, ಹರೀಶ್, ಅಜೀಜ್, ಶಶಿಕುಮಾರ್ ರೈ,ಶಾಲಾ ಮುಖ್ಯೋಪಾದ್ಯಾಯನಿ ಹೇಮಾವತಿ ಸಹ ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.