ಸರ್ಕಾರಿ ಶಾಲೆಯೆಂಬ ಕೀಳರಿಮೆ ಸಲ್ಲ, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಅಭಿಮತ, ಪ್ರತಿಭಾನ್ವಿತರಿಗೆ ಸನ್ಮಾನ

12 dbp 1
Published on

ದೊಡ್ಡಬಳ್ಳಾಪುರ: ಉನ್ನತ ಹುದ್ದೆಗಳಲ್ಲಿರುವವರು ಹೆಚ್ಚಿನ ಮಂದಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಆಗಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಸಲ್ಲ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ದೊಡ್ಡಬೆಳವಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೊಡ್ಡಬೆಳವಂಗಲ, ಸಾಸಲು ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರ ಪರ ಕೆಲಸ ಮಾಡುವ ಅವಕಾಶ ಸಿಗುವುದು ಸಹಕಾರಿ ಸಂಘದಲ್ಲಿ ಮಾತ್ರ. ರೈತರು ಮತ್ತು ಡೇರಿಗಳ ಮಧ್ಯೆ ಉತ್ತಮ ಸಂಬಂಧ ರೂಪಿಸುವ ಕೆಲಸವನ್ನು ಬಮುಲ್ ಮಾಡುತ್ತಿದೆ ಎಂದರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೆಎಂಎಫ್ ಮತ್ತು ಬಮುಲ್ ಸಹಯೋಗದಲ್ಲಿ ಸುಮಾರು 250 ಕೋಟಿ ರೂಪಾಯಿ ವೆಚ್ಚದ ಟೆಟ್ರಾಪ್ಯಾಕ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಎರಡು ತಿಂಗಳಲ್ಲಿ ಭೂಮಿ ಪೂಜೆ ನೇರವೇರಿಸಲಾಗುವುದು ಎಂದರು.

ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಮಾತನಾಡಿ, ರಾಜಕಾರಣಿಗಳು ಜಾತಿ, ಧರ್ಮದ ಅಮಲನ್ನು ಏರಿಸಿ ಯುವ ಸಮುದಾಯದ ಹಾದಿ ತಪ್ಪಿಸುತ್ತಿದ್ದಾರೆ. ಇದು ಸರಿಯಲ್ಲ. ಮುಂದಿನ ಸರ್ಕಾರಗಳು ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಭಾಗ್ಯ ನೀಡಬೇಕು ಎಂದರು.

ಕೋವಿಡ್ ವೇಳೆ ಮೃತಪಟ್ಟ ರೈತ ಕುಟುಂಬಸ್ಥರು ಇನ್ನೂ ಯಾರಾದರೂ ಅರ್ಜಿ ಸಲ್ಲಿಸದಿದ್ದರೆ ಶೀಘ್ರವಾಗಿ ಸಲ್ಲಿಸಿ ಎಂದರು.

ಐದಾರು ತಿಂಗಳಿಂದ ಹಾಲಿನ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರ ರೈತರ ಪರ ಕಾಳಜಿ ತೋರಿಸುತ್ತಿಲ್ಲ. ಮುಂದೆ ಹೋರಾಟದ ಮುಖಾಂತರ ದರ ಏರಿಕೆಗೆ ಪಟ್ಟು ಹಿಡಿಯಲಾಗುವುದು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬಮುಲ್ ಸೇರಿ ವಿವಿಧ ಒಕ್ಕೂಟದ ನಿರ್ದೇಶಕರು ಒಕ್ಕೊರಲಿನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಶಾಸಕ ವೆಂಕಟರಮಣಯ್ಯ ಮಾತನಾಡಿ, ಹಾಲು ಮತ್ತು ರೇಷ್ಮೆಯಿಂದ ರೈತರ ಬದುಕು ಹಸನಾಗಿದೆ. ರೈತರು ಡೇರಿಗಳಿಗೆ ಗುಣಮಟ್ಟದ ಹಾಲನ್ನು ನೀಡಬೇಕು ಎಂದರು.

ಎಪಿಎಂಸಿ ಮಾಜಿ ನಿರ್ದೇಶಕ ಗೋವಿಂದರಾಜು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ಒಂದು ನಾಟಿ ಹಸು ಸಾಕಿದರೆ ಕನಿಷ್ಠ ಒಂದು ತಿಂಗಳಿಗೆ ಮೂವತ್ತು ಸಾವಿರ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಟಿಎಪಿಎಂಸಿಎಸ್ ಅಧ್ಯಕ್ಷ ಅಂಜನಗೌಡ, ಮಾಜಿ ಅಧ್ಯಕ್ಷ ಸಿದ್ದರಾಮಯ್ಯ, ಎಪಿಎಂಸಿ ಮಾಜಿ ನಿರ್ದೇಶಕ ಗೋವಿಂದರಾಜು, ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜಕುಮಾರ್, ಸರ್ಕಾರಿ ಕಾಲೇಜು ಪ್ರಾಂಶುಪಾಲ ಪಾಲನೇತ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net