ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹ

23BTP01 (1)
ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರ್ಟ್ ಕ್ಲಾಸ್‌ಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಲಕ್ಷ ರೂ. ಸಹಾಯಧನದ ಮಂಜೂರಾತಿ ಆದೇಶ ಪತ್ರವನ್ನು ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಶಾಲೆಗೆ ಹಸ್ತಾಂತರ ಮಾಡಿದರು. ಸಂತೋಷ್‌ಕುಮಾರ್ ಜೈನ್, ಬಸವೇಗೌಡ, ಶಶಿಧರ್, ಸತೀಶ್ ಆರಾಧ್ಯ, ಮಾಲತಿ ಪಂಡಿತಾರಾಧ್ಯ, ಬಿ.ಪಿ ಚನ್ನೇಗೌಡ ಇದ್ದರು.
Published on

ಬೆಟ್ಟದಪುರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರೋತ್ಸಾಹ ನೀಡುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸಹಾಯಧನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಬಸವೇಶ್ವರ ಶಾಲಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರ್ಟ್‌ಕ್ಲಾಸ್ ಕೊಠಡಿಗೆ ಸಂಸ್ಥೆ ವತಿಯಿಂದ ಒಂದು ಲಕ್ಷ ರೂ. ಸಹಾಯಧನದ ಮಂಜೂರಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಹಾಗೂ ಅವಕಾಶಗಳು ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ. ಪಾಲಕರು ಪ್ರತಿಷ್ಠೆ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪಿಸುವಂತೆ ಕೋರಿದರು.

ಸಂಸ್ಥೆಯ ಬೆಟ್ಟದಪುರ ವಲಯ ಯೋಜನೆ ಅಧಿಕಾರಿ ಸಂತೋಷ್‌ಕುಮಾರ್ ಜೈನ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವೇಗೌಡ, ಸದಸ್ಯ ಶಶಿಧರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ಗ್ರಾ.ಪಂ ಮಾಜಿ ಸದಸ್ಯೆ ಮಾಲತಿ ಪಂಡಿತಾರಾಧ್ಯ, ಟ್ರಸ್ಟ್ ಸಂಚಾಲಕರಾದ ಮಂಜುನಾಥ್, ಸಣ್ಣಸ್ವಾಮಿ, ವಲಯ ಮೇಲ್ವಿಚಾರಕ ಮಂಜುನಾಥ್, ಮುಖ್ಯಶಿಕ್ಷಕ ಬಿ.ಪಿ ಚನ್ನೇಗೌಡ, ಶಿಕ್ಷಕರಾದ ಯೋಗೇಶ್, ಪುಷ್ಪಾವತಿ, ಚೈತ್ರ, ರಕ್ಷಿತ್ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net