

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅರೇಹಳ್ಳಿ ಭೋವಿಹಟ್ಟಿ ಸರ್ಕಾರಿ ಶಾಲೆಗೆ 15 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯ ಒದಗಿಸಲಾಗಿದೆ.
ಬೆಂಗಳೂರಿನ ವಾಲ್ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉತ್ತಿಷ್ಠ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲ್ಟೆಕ್ ಸಿಎಸ್‌ಆರ್ ಕಮಿಟಿ ಚೇರ್ಮನ್ ತೇಜಸ್ವಿನಿ, ಯೋಜನೆ ಮುಖ್ಯಸ್ಥ ಕೆ.ಎಸ್.ಪಾಲಾಕ್ಷ, ಉತ್ತಿಷ್ಠ ಸಂಸ್ಥೆಯ ರಿಜೇಶ್ ಸೌಲಭ್ಯ ವಿತರಿಸಿದರು.
ಹೈಟೆಕ್ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಇಡೀ ಶಾಲೆಗೆ ವಾಟರ್ ಪ್ರೂಫಿಂಗ್ ಬಣ್ಣ, ನಲಿಕಲಿ ಕೊಠಡಿಯ ಸೌಂದರ್ಯೀಕರಣ, ಮಕ್ಕಳಿಗೆ ಟೇಬಲ್, ಎಲ್ಲ ವಿದ್ಯಾರ್ಥಿಗೂ ಬ್ಯಾಗ್, ನೋಟ್‌ಬುಕ್, ಜಾಮಿಟ್ರಿ ಬಾಕ್ಸ್, ಒಂದು ಜೊತೆ ಉಡುಪು, ಶೂ, ಆಟೋಪಕರಣ, ಪಾಠೋಪಕರಣ, ಕುರ್ಚಿಗಳನ್ನು ವಿತರಿಸಿದ್ದು, ಆಧುನಿಕ ಸ್ಪರ್ಶ ನೀಡಲಾಗಿದೆ.
ತೇಜಸ್ವಿನಿ ಮಾತನಾಡಿ, ಸಂಸ್ಥೆಯು ಒದಗಿಸಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಖಾಸಗಿ ಸಂಸ್ಥೆಗಳು ಕೈಜೋಡಿಸಿದರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಬದಲಾಯಿಸಬಹುದು. ಸಂಘ-ಸಂಸ್ಥೆಗಳ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿ ಎಂದು ಮನವಿ ಮಾಡಿದರು.
ಇದೇ ವೇಳೆ ಶಾಲೆಯ ಸಹ ಶಿಕ್ಷಕ ಮಹೇಶ್ ಅವರಿಗೆ ಟ್ಯಾಬ್‌ವೊಂದನ್ನು ನೀಡಲಾಯಿತು. ಬಿಆರ್‌ಸಿ ಸುರೇಂದ್ರನಾಥ್, ಇಸಿಒ ಕೊಟ್ರೇಶ್, ಬಿಆರ್‌ಪಿ ರಾಮಪ್ಪ, ಸಿಆರ್‌ಪಿ ಮುರಳೀಧರ್, ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮುಖ್ಯಶಿಕ್ಷಕರಾದ ಪ್ರಶಾಂತ್, ಶೈಲಜಾ, ಸಹ ಶಿಕ್ಷಕ ಬಿ.ಆರ್.ಅಜ್ಜಪ್ಪ ಇತರರಿದ್ದರು.