

ಎನ್.ಆರ್.ಪುರ: ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಸೀತೂರು ಗ್ರಾಮ ಪಂಚಾಯಿತಿ ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ.ಗೋಪಾಲರಾವ್ ಕಳವಳ ವ್ಯಕ್ತಪಡಿಸಿದರು.
ಸೀತೂರು ಸರ್ಕಾರಿ ಶಾಲೆಯಲ್ಲಿ ನಡೆದ ಶಾರದಾ ಪೂಜೆ, ಸನ್ಮಾನ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕಲಿಸಲಾಗುತ್ತಿದೆ. ಕೌಶಲಾಧಾರಿತ ಶಿಕ್ಷಕರೂ ಇದ್ದಾರೆ. ಆದರೂ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ ಎಂದರು.
ಸೀತೂರು ಗ್ರಾಪಂ ಸದಸ್ಯ ಎಸ್.ಉಪೇಂದ್ರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚಿಸಲು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು. ಬಿಪಿಎಲ್ ಕಾರ್ಡುದಾರರು ಸರ್ಕಾರದಿಂದ ಹಲವಾರು ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರದಿಂದ ಸೌಲಭ್ಯ ಪಡೆದವರು ಕಡ್ಡಾಯವಾಗಿ 7ನೇ ತರಗತಿಯವರೆಗಾದರೂ ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ಸಲಹೆ ನೀಡಿದರು.
ಸೀತೂರು ಶಾಲೆಯಿಂದ ಗುಳ್ಳದಮನೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಶಿಲ್ಪಕುಮಾರಿ, ಬಿಸಿಯೂಟ ತಯಾರಿ ನಿವೃತ್ತ ಸಿಬ್ಬಂದಿ ಸುಜಾತಾ, ಅನಿಲ್‌ಕೌರ್ ನೆನಪಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗವಿರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಸೀತೂರು ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ, ಸದಸ್ಯರಾದ ವಿಶಾಲಾಕ್ಷಿ, ಜಯಂತಿ, ವಸಂತಾ, ಪ್ರಭಾರ ಮುಖ್ಯಶಿಕ್ಷಕ ಬಸಪ್ಪ, ಶಿಕ್ಷಕರಾದ ಸುರೇಶ್, ಗವಿರಂಗಪ್ಪ, ಅತಿಥಿ ಶಿಕ್ಷಕರಾದ ಮಧುರಾ, ನಾಗವೇಣಿ ಇದ್ದರು.