

ತೀರ್ಥಹಳ್ಳಿ: ಅಂದಾಜು 25 ವರ್ಷಗಳಿಂದ ಸುಣ್ಣಬಣ್ಣವಿಲ್ಲದೇ ಸೊರಗಿದ್ದ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯನ್ನು ಸ್ವಯಂಪ್ರೇರಿತರಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಬಣ್ಣ ಬಳಿದು ಅಂದಗೊಳಿಸುವ ಕಾರ್ಯದಲ್ಲಿ ಬೆಂಗಳೂರಿನ ಕನ್ನಡ ಮನಸ್ಸುಗಳ ತಂಡದ ಸ್ವಯಂಸೇವಾ ಕಾರ್ಯಕರ್ತರು ನಿರತರಾಗಿದ್ದಾರೆ. ಅವರಿಗೆ ದೇಶಕ್ಕಾಗಿ ನಾವು ತಂಡದ ನೆರವು ನೀಡಿದೆ.
ಕನ್ನಡ ಮನಸ್ಸುಗಳ ತಂಡದ ಮುಖ್ಯಸ್ಥ ಪ್ರವೀಣ್ ಧರೆಗುಂಡಿ ನೇತೃತ್ವದಲ್ಲಿ ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಇಲ್ಲಿಗೆ ಆಗಮಿಸಿರುವ 40 ಜನರ ತಂಡ ಈ ಕಾರ್ಯದಲ್ಲಿ ನಿರತವಾಗಿದೆ. ವಿಶಾಲವಾದ ಈ ಕಟ್ಟಡ ಸಂಕೀರ್ಣದ ಪೇಂಟಿಂಗ್‌ಗೆ ಲಕ್ಷಾಂತರ ರೂ ವೆಚ್ಚ ತಗುಲಲಿದ್ದು ಈ ವೆಚ್ಚವನ್ನು ದಾನಿಗಳ ನೆರವಿನಿಂದ ಕನ್ನಡ ಮನಸ್ಸುಗಳ ತಂಡವೇ ಭರಿಸಿದೆ. ಈ ತಂಡಕ್ಕೆ ಸ್ಥಳೀಯರಾದ ದೇಶಕ್ಕಾಗಿ ನಾವು ತಂಡದವರು ನೆರವು ನೀಡುತ್ತಿದ್ದಾರೆ. ಈ ತಂಡದವರು ಮಾಡುತ್ತಿರುವ ಸತ್ಕಾರ್ಯಕ್ಕೆ ಬೆಂಗಳೂರಿನ ಸೂರ್ಯ ಫೌಂಡೇಷನ್ ನೆರವು ಕೂಡ ಇದೆ.
ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ಮನಸ್ಸುಗಳ ತಂಡದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿರುವ ಹಾಗೂ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸುಮಾರು 350 ಮಂದಿ ಸ್ವಯಂಸೇವಕರಿದ್ದಾರೆ. ಯಾವುದೇ ರೀತಿಯ ಪ್ರಚಾರವನ್ನೂ ಬಯಸದೆ ಕನ್ನಡದ ಕೆಲಸದಲ್ಲಿ ನಿರತರಾಗಿರುವ ಈ ತಂಡ ಈವರೆಗೆ 30 ಶಾಲೆಗಳನ್ನು ಸುಣ್ಣಬಣ್ಣದಿಂದ ಸುಂದರಗೊಳಿಸಿದೆ. 100 ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶವಿದೆ ಎಂದು ಪ್ರವೀಣ್ ಧರೆಗುಂಡಿ ತಿಳಿಸಿದರು.
ಈ ಕಾರ್ಯಕ್ಕೆ ನೆರವು ನೀಡುತ್ತಿರುವ ದೇಶಕ್ಕಾಗಿ ನಾವು ತಂಡದ ಆದರ್ಶಹುಂಚದಕಟ್ಟೆ, ಕೆಳಕೆರೆ ಪೂರ್ಣೇಶ್, ಸುಭಾಷ್ ಕುಲಾಲ್ ಇತರರು ಇದ್ದರು.