

ಚಾಮರಾಜನಗರ : ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವ 19 ಸರ್ಕಾರಿ ಶಾಲೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಈ ಸಂಬಂಧ ಯೋಜನೆಯ ಕಚೇರಿಯಲ್ಲಿ ಸೋಮವಾರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಶಿಕ್ಷಕರು ವಿಧ್ಯಾರ್ಥಿಗಳ ಮನಸನ್ನು ಅರಿತುಕೊಂಡು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ನಾಳಿನ ಪೀಳಿಗೆಯನ್ನು ಉತ್ತಮವಾಗಿ ಬೆಳೆಸಲು ಸಾಧ್ಯವಾಗಿ ಭವ್ಯ ಭಾರತದ ನಿರ್ಮಾಣದ ಕನಸು ನನಸು ಮಾಡಲು ಸಾಧ್ಯ ಎಂದರು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್ ರವಿಶಂಕರ್ ಮಾತನಾಡಿ, ಅತಿಥಿ ಶಿಕ್ಷಕರು ತಾವು ಆಯ್ಕೆಯಾದ ಶಾಲೆಗಳ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾದಾನ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಊರುಗೋಲಾಗಿ ಎಂದು ಶುಭ ಹಾರೈಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ನೀಡುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡುತ್ತಾ, ಸಮುದಾಯ ಅಭಿವೃದ್ಧಿ ಕಾರ್ಯಕ್ರದಡಿಯಲ್ಲಿ ಅತಿಥಿ ಶಿಕ್ಷಕರ ಆಯೋಜನೆ, ಶಾಲಾ ಮಕ್ಕಳಿಗೆ ಕುಡಿಯುವ ನೀರು, ಶಾಲಾ ಕಾಂಪೌಂಡ್ ರಚನೆ ಅನುದಾನ, ನಿರ್ಗತಿಕರಿಗೆ ಮಾಸಾಶನ, ನಿರ್ಗತಿಕರಿಗೆ ವಾತ್ಸಲ್ಯ ಮನೆ ರಚನೆ, ಕೆರೆ ಹೂಳೆತ್ತುವಿಕೆ, ಸಮುದಾನ ಕಟ್ಟಡಗಳ ಅನುದಾನ, ದೇವಸ್ಥಾನ ಜೀರ್ಣೋದ್ದಾರಕ್ಕೆ ಅನುದಾನ, ಜನಮಂಗಲ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಣೆ, ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿಯಾಗಿ ಆರ್ಥಿಕ ಸೌಲಭ್ಯ ಇನ್ನಿತರೆ ಕೊಡುಗೆಗಳನ್ನು ನೀಡಲಾಗಿದೆ ಎಂದರು. ಜಿಲ್ಲಾ ಎಂ.ಐ.ಎಸ್ ಯೋಜನಾಧಿಕಾರಿ ಆರತಿ, ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್ ಶೆಟ್ಟಿ ಇದ್ದರು.