

ಬೆಳಗಾವಿ: ಕರೊನಾ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಆದರೆ, ಇದೀಗ ಶೂ, ಸಾಕ್ಸ್, ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ಸೇರಿದಂತೆ ಸೌಲಭ್ಯ ಮತ್ತಷ್ಟು ಹೆಚ್ಚಿಸಿದ್ದರೂ, ಪ್ರಸಕ್ತ ವರ್ಷದಲ್ಲೇ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ವಿಮುಖರಾಗಿದ್ದಾರೆ.
2020-21ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ 1ನೇ ತರಗತಿಗೆ 39,326 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 21-22ರಲ್ಲಿ 43,689 ಹಾಗೂ ಈ ವರ್ಷ 37,354 ಮಕ್ಕಳು ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 6,635 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಒಟ್ಟು ಶಾಲಾ ದಾಖಲಾತಿಯಲ್ಲೂ ಕುಸಿತ ಕಂಡಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ರಲ್ಲಿ 3,91,555 ಆಗಿದ್ದ ಮಕ್ಕಳ ದಾಖಲಾತಿ 2021-22ರಲ್ಲಿ 3,98,932ಕ್ಕೆ ಏರಿತ್ತು. ಆದರೆ, 2022-23ರ ಸಾಲಿನಲ್ಲಿ 3,92,143ಕ್ಕೆ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 6,789 ಮಕ್ಕಳು ಕಡಿಮೆಯಾಗಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಉಪನ್ಯಾಸಕರೊಬ್ಬರು, ಕರೊನಾ ಅವಧಿಯಲ್ಲಿ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿ ನಡೆಸಿದ್ದವು. ಸರ್ಕಾರಿ ಶಾಲೆ ಶುರುವಾದರೂ ಅನೇಕ ಖಾಸಗಿ ಶಾಲೆಗಳು ಭೌತಿಕ ತರಗತಿ ನಡೆಸಿರಲಿಲ್ಲ. ಇದರಿಂದ ನಮ್ಮ ಊರಿನಲ್ಲಿನ ಸರ್ಕಾರಿ ಶಾಲೆಗೆ ದಾಖಲಿಸಿದ್ದೇವು. ಆದರೆ, ಈ ಬಾರಿ ಯಾವುದೇ ಆತಂಕವಿಲ್ಲದೆ, ನಾವೂ ನಗರದಲ್ಲೇ ವಾಸವಾಗಿದ್ದರಿಂದ ಮಕ್ಕಳನ್ನೂ ಇಲ್ಲಿಯೇ ಖಾಸಗಿ ಶಾಲೆಗೆ ದಾಖಲಿಸಿದ್ದೇವೆ ಎಂದರು.
ಕರೊನಾ ಸೋಂಕು ವ್ಯಾಪಿಸಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದರೂ 2020-21, 2021-22ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ, ಈ ಬಾರಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದಿರುವುದು ದಾಖಲಾತಿ ಅಭಿಯಾನಕ್ಕೆ ಹಿನ್ನೆಡೆ ತಂದಿದ್ದು, ಮುಂದಿನ ವರ್ಷವಾದರೂ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ದಾಖಲಾತಿ ಮಾಡಿಕೊಳ್ಳಲು ಅಧಿಕಾರಿಗಳು ಈಗಿನಿಂದಲೇ ಪ್ರಯತ್ನ ನಡೆಸಿದರೆ, ಮಾತ್ರ ಸರ್ಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಸಾಧ್ಯ ಎನ್ನುವುದು ಪ್ರಜ್ಞಾವಂತ ನಾಗರಿಕರ ಕಳಕಳಿ.
ಪಾಲಕರ ಆಯ್ಕೆ ಖಾಸಗಿ: ಪಾಲಕರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುವುದನ್ನು 1ನೇ ತರಗತಿ ಪ್ರವೇಶಾತಿ ಸಂದರ್ಭದಲ್ಲೇ ನಿರ್ಧರಿಸುತ್ತಾರೆ. 1ನೇ ತರಗತಿ ದಾಖಲಾತಿ ಪ್ರಮಾಣ ಹೆಚ್ಚಾದರೆ ಮುಂದಿನ ತರಗತಿಯಲ್ಲೂ ಅಷ್ಟೇ ಪ್ರಮಾಣದ ಮಕ್ಕಳ ಸಂಖ್ಯೆ ಇರುತ್ತದೆ. ಆದರೆ, ಈ ಬಾರಿ 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗಿನ ದಾಖಲಾತಿ ಪ್ರಮಾಣದಲ್ಲೂ ಕುಸಿತ ಕಂಡಿದೆ. ಪ್ರತಿ ತರಗತಿಯಲ್ಲೂ ಕನಿಷ್ಠ 500-700 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ತೆರಳಿದ್ದಾರೆಂದು ಸರ್ಕಾರಿ ಅಂಕಿ ಅಂಶ ಹೇಳುತ್ತಿವೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಕ್ರಮವಾಗಿ, 818, 866, 544, 783, 1148, 477, 1112, 863 ಹಾಗೂ 872 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಪಲಾಯನವಾಗಿದ್ದಾರೆ.
ಯಾವ ಹಂತದಲ್ಲಿ ದಾಖಲಾತಿ ಕಡಿಮೆ ಆಗಿದಿಯೋ ಅದೇ ಹಂತದಲ್ಲಿ ಹೆಚ್ಚಿಸಿಕೊಳ್ಳಲು ಕ್ರಮ ವಹಿಸಲಾಗಿದೆ. ಸಿಆರ್‌ಸಿ ಹಾಗೂ ಬಿಆರ್‌ಸಿಗಳ ಮೂಲಕ ಪ್ರತಿ ಶಾಲಾ ಮಟ್ಟದಲ್ಲಿಯೂ ಸರ್ಕಾರಿ ಶಾಲೆಗಳಲ್ಲಿಯೇ ಪ್ರವೇಶಾತಿ ಪಡೆಯುವಂತೆ ಪಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ.| ಬಸವರಾಜ ನಾಲತವಾಡ ಬೆಳಗಾವಿ ಡಿಡಿಪಿಐ
| ಶಿವಾನಂದ ಕಲ್ಲೂರ ಬೆಳಗಾವಿ