

ಕಮಲನಗರ: ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಿಗೂ ಮೂಲ ಸೌಕರ್ಯ ದೊರೆಯುವಂತಾಗಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ರಾಹುಲ ಶಿಂಗನೆ ಹೇಳಿದರು.
ಮದನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತುಳಜಾಭವಾನಿ ಅರ್ಬನ್ ಬ್ಯಾಂಕ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಮಕ್ಕಳಿಗೆ ವೆಲ್‌ಕಮ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಜಪ ಮಾಡುವ ಕೈಗಳಿಗಿಂತಲೂ ಸೇವೆ ಮಾಡುವ ಕೈಗಳೇ ಶ್ರೇಷ್ಠವಾಗಿದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎನ್ನುವ ಸದುದ್ದೇಶದಿಂದ ತುಳಜಾಭವಾನಿ ಅರ್ಬನ್ ಬ್ಯಾಂಕ್‌ನವರು ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಪೆನ್ಸಿಲ್ ಉಳ್ಳ ವೆಲ್‌ಕಮ್ ಕಿಟ್ ವಿತರಿಸಿದ್ದು ಶ್ಲಾಘನೀಯವಾಗಿದೆ ಎಂದರು.
ಮುಖ್ಯಗುರು ಪ್ರಕಾಶ ಬೆಂಬಳಗೆ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ಸದಸ್ಯ ರಮೇಶ ಬರ್ಗೆ, ಶಶಿಕಾಂತ ಪಾಟೀಲ್, ಅನಿಲಕುಮಾರ ಬಾಳೂರೆ, ವಿಜಯಕುಮಾರ ಕುಲಕರ್ಣಿ, ಗೀತಾ ಸಜ್ಜನಶೆಟ್ಟಿ, ಶ್ರೀಪಾದ ಕುಲಕರ್ಣಿ, ಬ್ಯಾಂಕ್ ಸಿಬ್ಬಂದಿ ಜ್ಞಾನೇಶ್ವರ ಜಾಧವ್, ನೀಲೇಶ ಶಿಂಧೆ, ಸುಗುಣಾ ಹರಪಳ್ಳೆ ಇತರರಿದ್ದರು.