ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿ

PH 09
Published on

ಸೇಡಂ: ಇತ್ತೀಚೆಗೆ ಸರ್ಕಾರ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು, ತಾಲೂಕಿನ ಕೆಲ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇದರಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ದೂರಿದರು.

ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಮುಧೋಳದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶರಣಗೌಡ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಸಾಮೂಹಿಕ ವರ್ಗಾವಣೆ ಪ್ರಕ್ರಿಯೆಯಲ್ಲಿ ನೂರಾರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮದನಾ, ಕಡಚರ್ಲಾ, ವೆಂಕಟಾಪುರ, ಕಡತಾಲ, ಜಾಕನಪಲ್ಲಿ, ಮುನಕನಪಲ್ಲಿ, ರೆಬ್ಬನಪಲ್ಲಿ ಸೇರಿ ಹಲವು ಗ್ರಾಮಗಳಲ್ಲಿನ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ. ವರ್ಗಾವಣೆ ಮಾಡಲೇಬೇಕಾದರೆ ಅಲ್ಲಿ ಬದಲಿ ವ್ಯವಸ್ಥೆ ಮಾಡಬೇಕಾಗಿತ್ತು. ಅದ್ಯಾವ ಕೆಲಸವೂ ಆಗಿಲ್ಲ ಎಂದು ಕಿಡಿಕಾರಿದರು.

ಈ ಬಗ್ಗೆ ಶಿಕ್ಷಣ ಇಲಾಖೆ ಅಪರ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ಮನವಿಪತ್ರ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ 8 ದಿನದೊಳಗೆ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಮಹೇಶ ಪಾಟೀಲ್, ಚಂದ್ರಶೇಖರ ಪೂಜಾರಿ, ಶ್ರೀನಿವಾಸರೆಡ್ಡಿ ಮದನಾ, ಸಂಜಪ್ಪ ಮದನಾ, ಮಹೇಶರೆಡ್ಡಿ ಜಾಕನಪಲ್ಲಿ, ರಾಘವೇಂದ್ರ, ಸಿದ್ದಲಿಂಗಪ್ಪ, ಅನೀಲ, ಚಂದ್ರಶೇಖರ ಮುಧೋಳ, ಪ್ರವೀಣ ಕೋಡ್ಲಾ, ಮಲ್ಲಿಕಾರ್ಜುನ ಕಾಕಲವಾರ, ಪುಲಸಿಂಗ್, ಚಂದ್ರು ತಳವಾರ, ನರಸಪ್ಪ, ಭಗವಂತು ರಂಜೋಳ, ಗುಂಡಪ್ಪ, ಅಭಿಷೇಕ, ಅಶೋಕ ಪಾಕಲ್, ರಮೇಶ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net