

ವಿರಾಜಪೇಟೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕಲಿಕೆಗಾಗಿ ಉತ್ತಮ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ. ಬೆಂಗಳೂರು ಮೂಲದ ಸ್ವಯಂ ಸೇವಾ ಸಂಸ್ಥೆಗಳು ವಿರಾಜಪೇಟೆ ಮತ್ತು ಅಮ್ಮತ್ತಿ ಹೋಬಳಿಯ ಆಯ್ದ ಸರ್ಕಾರಿ ಶಾಲೆಗಳಿಗೆ ಕಲಿಕಾ ಉಪಕರಣಗಳ ವಿತರಣೆ ಮತ್ತು ಗೋಡೆಗಳಲ್ಲಿ ವರ್ಲಿ ವರ್ಣ ಚಿತ್ರಗಳನ್ನು ಬಿಡಿಸುವುದರ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜಾಗೃತಿ ಮೂಡಿಸಿತು.
ಜಾಗೃತಿ ಟ್ರಸ್ಟ್ ಬೆಂಗಳೂರು ಮತ್ತು ಸಿಸ್ಕೋ ಸಂಸ್ಥೆಯ 85 ಸ್ವಯಂ ಸೇವಕರ ತಂಡ ಇತ್ತೀಚೆಗೆ ದ.ಕೊಡಗು ಜಿಲ್ಲೆಯ ಅಮ್ಮತ್ತಿ, ಹೊಸೂರು, ಸಿದ್ದಾಪುರ ಬಿಳುಗುಂದ ಮತ್ತು ನಲ್ವತೋಕ್ಲು ಸರ್ಕಾರಿ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಲ್ಲಿ ಕ್ರೀಡಾ ಆಸಕ್ತಿಗಳ ಬೆಳವಣಿಗೆಗಾಗಿ ವಿವಿಧ ಕ್ರೀಡೆಗಳು, ಹೈಜೀನ್ ಕಿಟ್, ಗಣಿತ ಮತ್ತು ವಿಜ್ಞಾನ ಕಲಿಕೋಪಕರಣಗಳು, ಬ್ಯಾಂಡ್ ಸೆಟ್ ವಿತರಣೆ, ಪರಿಸರ ಸಂರಕ್ಷಣೆಗಾಗಿ ಕಾಂಪೊಸ್ಟ್ ಗುಂಡಿ ನಿರ್ಮಾಣ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಅಮ್ಮತ್ತಿ ಶಾಲಾ ಸಭಾಂಗಣದಲ್ಲಿ ಸಂಸ್ಥೆಯ ವಿವಿಧ ಸ್ವಯಂ ಸೇವಕರು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಮಾಡಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ದೊರಕುವ ಅವಕಾಶ ಮತ್ತು ಇತರ ಕಲಿಕೆಗಾಗಿ ಸೌಲಭ್ಯಗಳನ್ನು ಪರಿಗಣಿಸಿ ಸರ್ಕಾರಿ ಶಾಲೆಗಳಲ್ಲಿ ಸಂಸ್ಥೆಯ ಕಲ್ಪನೆ ಹಾಗೂ ಸ್ವಯಂ ಸೇವಕರ ಸೇವಾ ಮನೋಭಾವದಿಂದ ಶಾಲೆಗಳ ಕುಂದು ಕೊರತೆಗಳನ್ನು ಅಲ್ಪ ಪ್ರಮಾಣದಲ್ಲಿ ನೀಗಿಸುವ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಒಲವು ಹೆಚ್ಚಾಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಅಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಸಂಪತ್ ಬಾನಂಡ, ಸ್ವಯಂ ಸೇವಕರಾದ ವಿಷ್ಣು ಮಾತನಾಡಿದರು. ವೇದಿಕೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪರಿತೋಷಕಗಳನ್ನು ವಿತರಿಸಲಾಯಿತು.
ಜಾಗೃತಿ ಸೇವಾ ಸಂಸ್ಥೆ ಮತ್ತು ಸಿಸ್ಕೋ ಸಂಸ್ಥೆಯ ವತಿಯಿಂದ ಆಯ್ದ ಶಾಲೆಗಳಲ್ಲಿ ನಡೆದ ಕಲಿಕಾ ಚಟುವಟಿಕೆ ಕಾರ್ಯಕ್ರಮಗಳಲ್ಲಿ ಜಾಗೃತಿ ಟ್ರಸ್ಟ್‌ನ ಕೋಶಾಧಿಕಾರಿಗಳಾದ ಕೊಂಡಿಂಜಮ್ಮಂಡ ಶರಣನು, ಕಣ್ಣನ್, ನೋಯಲ್ ಜಾಗೃತಿ ಟ್ರಸ್ಟ್ ನ ಸಂಸ್ಥಾಪಕ ರೇಣು ಅಪ್ಪಚ್ಚು ಸೇರಿದಂತೆ 85 ಮಂದಿ ಸ್ವಯಂ ಸೇವಕರು, ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.