ಸರ್ಕಾರಿ ಶಾಲೆಗಳಿಗೆ ಅನುದಾನದ ಬರ!  -ಜಿಲ್ಲೆಗೆ ಬಾರದ 118 ಕೋಟಿ ರೂ. -661 ಕೊಠಡಿ ನಿರ್ಮಾಣ ಪ್ರಸ್ತಾವ -ಹಣದ ನಿರೀಕ್ಷೆಯಲ್ಲಿ ಡಿಡಿಪಿಐ ಕಚೇರಿ

93651826.jpg
Published on

ಡಿ.ಎಂ.ಮಹೇಶ್, ದಾವಣಗೆರೆ

ವರುಣನ ವಿಶ್ರಾಂತಿ ಒಂದೆಡೆ ರೈತರನ್ನು ಕಂಗಾಲು ಮಾಡಿದೆ. ಇನ್ನೊಂದೆಡೆ ದುರಸ್ತಿ-ಕೊಠಡಿ ಕಾಮಗಾರಿಗಳ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಬಹುತೇಕ ಶಾಲೆಗಳು ಅನುದಾನದ ಬರಗಾಲಕ್ಕೆ ತುತ್ತಾಗಿವೆ!

ಕಳೆದೆರಡು ತಿಂಗಳ ಹಿಂದೆ ಸುರಿದ ಮಳೆ, ಅಲ್ಲಲ್ಲಿ ಶಾಲಾ ಚಟುವಟಿಕೆಗೂ ಬ್ರೇಕ್ ಹಾಕಿತ್ತು. ಜಿಲ್ಲೆಯ 607 ಶಾಲೆಗಳ ಕೊಠಡಿಗಳು ಹಾನಿಯಾಗಿದ್ದವು. ಸಣ್ಣ-ಪುಟ್ಟ ದುರಸ್ತಿ ಕಾಮಗಾರಿ ಆಗಬೇಕಿತ್ತು. ಇದರಲ್ಲಿ 202 ಪ್ರಾಥಮಿಕ, 405 ಪ್ರೌಢಶಾಲೆಗಳಿವೆ.

1166 ಶಾಲಾ ಕೊಠಡಿಗಳ ದುರಸ್ತಿ ಆಗಬೇಕಿದ್ದರೂ ಕ್ರಿಯಾಯೋಜನೆ ಸಲ್ಲಿಕೆಯಾಗಿದ್ದು 1148 ಕೊಠಡಿಗಳು ಮಾತ್ರ. ಜಿಲ್ಲಾ ಪಂಚಾಯ್ತಿ ಮೂಲಕ ಸರ್ಕಾರಕ್ಕೆ ಇದನ್ನು ಸಲ್ಲಿಸಲಾಗಿತ್ತು. ಒಟ್ಟು 24.35 ಲಕ್ಷ ರೂ. ಬೇಡಿಕೆ ಇದ್ದರೂ ಇದುವರೆಗೆ ಹಣಕಾಸು ಲಭ್ಯತೆ ಇಲಾಖೆಗೆ ದೊರೆತಿಲ್ಲ.

ಚನ್ನಗಿರಿ ತಾಲೂಕಿನ 139 ಶಾಲೆಯ 316, ದಾವಣಗೆರೆ- 196 ಶಾಲೆಯ 393, ಹರಿಹರ- 92 ಶಾಲೆಯ 185, ಹೊನ್ನಾಳಿ- 25 ಶಾಲೆಯ 40, ಜಗಳೂರು ತಾಲೂಕಿನ 155 ಶಾಲೆಯ 214 ಕೊಠಡಿಗಳು ದುರಸ್ತಿಗೆ ಕಾದಿವೆ. ಹೆಂಚು ಅಳವಡಿಕೆ, ಗೋಡೆ ಬಿರುಕು, ತಾರಸಿ ಸೋರುವಿಕೆ ಮೊದಲಾದ ರಿಪೇರಿ ಕೆಲಸಗಳಿವೆ.

ಲೋಕಾಯುಕ್ತರು ಕೇಳಿದ ಮಾಹಿತಿಯನ್ವಯ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ಕಾಮಗಾರಿಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದಾಗ 661 ಕೊಠಡಿ ಅಗತ್ಯ ಕಂಡುಬಂದಿತು. ಇದರ ಪಟ್ಟಿಯನ್ನು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿ, 93.62 ಕೋಟಿ ರೂ.ಗಳ ಬೇಡಿಕೆ ಸಲ್ಲಿಸಲಾಗಿತ್ತು.

ಇದರಲ್ಲಿ 351 ಪ್ರಾಥಮಿಕ ಶಾಲೆಗಳ 591, 31 ಪ್ರೌಢಶಾಲೆಗಳ 70 ಕೊಠಡಿ ನಿರ್ಮಾಣ ಆಗಬೇಕಿದೆ. ಆದರೆ ಈ ಅನುದಾನ ಕೂಡ ಜಿಲ್ಲೆಗೆ ಸಂದಾಯವಾಗಿಲ್ಲ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕೊಠಡಿ ಲಭ್ಯವಿರುವ ಕಡೆಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಆದರೂ, ಕೆಲ ಶಾಲೆಗಳ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅಪಾಯದ ಮಟ್ಟದಲ್ಲಿವೆ. ಅವನ್ನು ನೆಲಸಮ ಮಾಡುವ ಹೊಣೆ ಅಧಿಕಾರಿಗಳ ಮೇಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಸುತ್ತೋಲೆಯನ್ವಯ ಅಂತಹ ಕೊಠಡಿಗಳ ಪಟ್ಟಿ ಸಿದ್ಧಪಡಿಸಿಕೊಂಡಿರುವ ಶಿಕ್ಷಣಾಧಿಕಾರಿಗಳು ಸದ್ಯಕ್ಕೆ ಅಲ್ಲಿನ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಣ ಬಿಡುಗಡೆಗೆ ಸಮಸ್ಯೆಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಂತ-ಹಂತವಾಗಿ ಸರ್ಕಾರದಿಂದ ಅನುದಾನ ಬಂದಂತೆ ಕಾಮಗಾರಿ ವೇಗವಾಗಲಿದೆ. ಶಾಸಕರ ನಿಧಿ ಕೂಡ ಬಳಸಿಕೊಳ್ಳಬಹುದಾಗಿದೆ ಎಂಬುದು ಅಧಿಕಾರಿಗಳ ಮಾತು.

ಕಾಮಗಾರಿ ಬೇಡಿಕೆ

ತಾಲೂಕು ಕೊಠಡಿ ಅನುದಾನ

ಚನ್ನಗಿರಿ 110 16.05 ಕೋ.

ದಾವಣಗೆರೆ 228 32.21 ಕೋ.

ಹರಿಹರ 108 15.38 ಕೋ.

ಹೊನ್ನಾಳಿ 75 10.52 ಕೋ

ಜಗಳೂರು 52 19.44 ಕೋ

--------------------

ಒಟ್ಟು 661 93.62 ಕೋ.

--------------------

ಮಳೆಹಾನಿ ಬಾಧಿತ ಕೊಠಡಿಗಳು ರಿಪೇರಿ ಸಂಬಂಧ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ. ಅಗತ್ಯ ಕೊಠಡಿಗಳ ನಿರ್ಮಾಣಕ್ಕೂ ಅನುದಾನದ ನಿರೀಕ್ಷೆಯಲ್ಲಿದ್ದೇವೆ.

ಡಿ. ಕೊಟ್ರೇಶ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net