ಸರ್ಕಾರಿ ಶಾಲೆಗಳಲ್ಲಿ ನೈಜ ಪ್ರತಿಭೆ ಹೊರಹೊಮ್ಮಲು ಸಾಧ್ಯ: ನಿವೃತ್ತ ಡಿಡಿಪಿಐ ಸ್ವಾಮಿ ಅಭಿಮತ

12 edi
Published on

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಮಾತ್ರ ನೈಜ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ಡಿಡಿಪಿಐ ಸ್ವಾಮಿ ಅಭಿಪ್ರಾಯಪಟ್ಟರು.
ಶರಣು ವಿಶ್ವವಚನ ಫೌಂಡೇಷನ್‌ನಿಂದ ನಗರದ ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮವಸ್ತ್ರ ವಿತರಣೆ ಮತ್ತು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಙಾನ ಯುಗವಾಗಿದ್ದು, ದೇಶ ವೇಗವಾಗಿ ಬೆಳವಣಿಗೆ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಯಾವುದೇ ದೇಶ ಸಾಂಸ್ಕೃತಿಕವಾಗಿ ಬೆಳೆಯಲು ವಿವಿಧ ರೀತಿಯ ಸಾಹಿತ್ಯ ಹಾಗೂ ಸಂಸ್ಕಾರಯುತ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಚನಗಳು ಕೇವಲ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರದೆ ಸರ್ವಜನಾಂಗದ ತೋಟದ ನಿರ್ಮಾಣ ಮಾಡಲು ಸಹಕಾರಿಯಾಗಿವೆ ಎಂದು ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಜ್ಞಾನದಿಂದ ಹುದ್ಧೆ ದೊರೆತರೆ ಸಂಸ್ಕಾರದಿಂದ ಗೌರವ ಸಿಗುತ್ತದೆ. ವಚನ ಸಾಹಿತ್ಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗಿದ್ದು, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣರು ಎಚ್ಚರಿಕೆ ನೀಡುವ ವಚನಗಳನ್ನು ರಚಿಸಿದ್ದು ಅದರಂತೆ ನಡೆದರೆ ನಾವು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಸಂಸ್ಥೆಯಿಂದ ಇದುವರೆಗೆ 13 ಸರ್ಕಾರಿ ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗಿದೆ ಎಂದರು.
ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ವಿತರಿಸಲಾಯಿತು. ನಗರ ಪಾಲಿಕೆ ಸದಸ್ಯ ರವೀಂದ್ರ, ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಾ ರಮೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯದರ್ಶಿ ಅನಿತಾ ನಾಗರಾಜ್, ಕೇಂದ್ರೀಯ ಸಂಚಾಲಕರಾದ ವಿ.ಲಿಂಗಣ್ಣ, ಮಂಜುಳ ಶಿವಪ್ರಸಾದ್, ಸಾಂಸ್ಕೃತಿಕ ಸಂಚಾಲಕಿ ಸರಸ್ವತಿ ರಾಮಣ್ಣ, ಶಾಲಾ ಮುಖ್ಯ ಶಿಕ್ಷಕಿ ನಾಗವೇಣಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ವಿಜಯಾ, ಆರ್.ಎಸ್ ರಾಮಣ್ಣ, ಶಿವಪ್ರಸಾದ್ ಮೇಲುದುರ್ಗಮಠ ಶಿಕ್ಷಕರಾದ ಕೆ. ಭಾರತಿ, ಕೆ.ಟಿ. ಸೀತಾಲಕ್ಷ್ಮಿ, ಎಸ್.ಕೆ ಪದ್ಮಿನಿ, ನಿಜಗುಣ, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net