

ಕೊಪ್ಪಳ: ದಾಖಲಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಿರುವಂತೆ ಕರ್ನಾಟಕ ನವನಿರ್ಮಾಣ ಸೇನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ನಲಿನ್ ಅತುಲ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸುಮಾರು 100ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ದಾಖಲಾತಿಯ ನೆಪ ನೀಡಿ ವಿಲಿನ ಮಾಡಲಾಗುತ್ತಿದೆ. ಮಕ್ಕಳ ಹಾಜರಾತಿ ಕಡಿಮೆ ಎಂಬ ಕಾರಣಕ್ಕೆ ಮಾತೃಭಾಷೆ ಶಾಲೆ ಮುಚ್ಚುವ ಹುನ್ನಾರ ನಡೆಸಿದೆ. ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ರಾಯಚೂರ, ಕಲಬುರಗಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪೂರ, ಚಾಮರಾಜ ನಗರ ಜಿಲ್ಲೆಗಳಲ್ಲಿ ಶಾಲೆಗಳನ್ನು ಮಚ್ಚಲಾಗುತ್ತಿದೆ. ಇಲಾಖೆ ಮಾಹಿತಿ ಪ್ರಕಾರವೇ ಕಿತ್ತೂರು ಕರ್ನಾಟಕ ಭಾಗದಲ್ಲಿ 64 ಶಾಲೆಗಳನ್ನು ಮುಚ್ಚಲಾಗಿದೆ. 584 ಶಾಲೆಗಳನ್ನು ಮುಚ್ಚುವ ಯೋಜನೆ ಇದೆ. ಇದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಶಾಲೆ ವಿಲೀನ ಮಾಡಬಾರದು. ಮಕ್ಕಳ ದಾಖಲಾತಿ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಗಡಿ ಭಾಗದ ಶಾಲೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು. ಖಾಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಸಂಕಷ್ಟದಿಂದ ಶಾಲೆಗಳನ್ನು ಹೊರ ತರಬೇಕು. ಶಾಲೆ ಮುಚ್ಚಿದ್ದಲ್ಲಿ ಸೇನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ, ಪದಾಧಿಕಾರಿಗಳಾದ ಬಸವರಾಜ ಕೊಪ್ಪಳ, ಶ್ಯಾಮ ಬೆನಗಿ. ಮಹಾಂತೇಶ, ಮರಿಯಪ್ಪ ಮಂಗಳೂರ,ವಿರೇಶ ಅಂಗಡಿ, ರಫಿ, ಸುರೇಶ ರೇವಡಿ ಇತರರಿದ್ದರು.