ಸರ್ಕಾರಿ ಶಾಲೆಗಳತ್ತ ಮಕ್ಕಳು

school
Published on

ಚಿಕ್ಕಬಳ್ಳಾಪುರ : ಪ್ರಸಕ್ತ ಸಾಲಿನಲ್ಲಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ದಾಖಲೆ ಪ್ರಮಾಣದಲ್ಲಿ ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಹಿಂದೆ ಪ್ರತಿ ವರ್ಷ ಖಾಸಗಿ ಶಾಲೆಗಳಿಂದ ಸರಾಸರಿ 200 ರಿಂದ 300 ಮಕ್ಕಳು ಸರ್ಕಾರಿ ಶಾಲೆಯತ್ತ ಬರುತ್ತಿದ್ದರು. ಆದರೆ, ಈ ಬಾರಿ 2673 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.ಕರೊನಾ ಹಿನ್ನೆಲೆಯಲ್ಲಿ ಈ ಭಾಗದ ಬಹುತೇಕರು ಆದಾಯವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಕಳೆದುಕೊಂಡು ಜೀವನ ನಡೆಸಲು ಪರದಾಡುತ್ತಿದ್ದಾರೆ. ಇದರ ನಡುವೆಯೂ ತರಗತಿಗಳು ಪ್ರಾರಂಭವಾಗದಿದ್ದರೂ ಆನ್ ಲೈನ್ ಶಿಕ್ಷಣ, ಪಠ್ಯಪುಸ್ತಕ ಸೇರಿ ನಾನಾ ನೆಪದಲ್ಲಿ ಖಾಸಗಿ ಶಾಲೆಗಳು ದುಬಾರಿ ಶುಲ್ಕ ಮತ್ತು ಡೊನೇಷನ್ ಪೀಕಲು ಪಾಲಕರಿಗೆ ಕಾಟ ಕೊಡುತ್ತಿವೆೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ, ಮಕ್ಕಳಿಗೆ ವಿಶೇಷ ಕಲಿಕೋಪಕರಣ ಸೌಲಭ್ಯದಿಂದ ಅಭಿವೃದ್ಧಿ ಹೊಂದಿ, ಆಕರ್ಷಕ ವಾತಾವರಣದ ಮೂಲಕ ಜನರನ್ನು ಸೆಳೆಯುತ್ತಿವೆೆ. ಜತೆಗೆ ವಿದ್ಯಾಗಮ ಯೋಜನೆಯು ಬಹುತೇಕ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗೆ ದಾಖಲಿಸಲಾಗಿದೆ.

ಖಾಸಗಿ ಶಾಲೆ ಶಿಕ್ಷಕರು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದರೆ, ಸರ್ಕಾರಿ ಶಾಲಾ ಶಿಕ್ಷಕರು ಮಾತ್ರ ಮನೆ ಮನೆಗೂ ತೆರಳಿ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂಪರ್ಕದಲ್ಲಿದ್ದು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. 1 ನೇ ತರಗತಿಗೆ ದಾಖಲಾತಿ ಬಯಸುವ, ಶಾಲೆ ಬಿಡುವ ಹಂತದಲ್ಲಿರುವ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕು ದಾಖಲಾದ ಮಕ್ಕಳ ಸಂಖ್ಯೆ : ಚಿಕ್ಕಬಳ್ಳಾಪುರ 743, ಗೌರಿಬಿದನೂರು 676, ಚಿಂತಾಮಣಿ 482

ಬಾಗೇಪಲ್ಲಿ 380, ಶಿಡ್ಲಘಟ್ಟ 326, ಗುಡಿಬಂಡೆ 64

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net